ಅಯೋಧ್ಯೆ(ಉತ್ತರ ಪ್ರದೇಶ): ರಘುರಾಮನ ಪ್ರತಿಷ್ಠಾಪನೆಯ ದಿವ್ಯ ಘಳಿಗೆಯಲ್ಲಿ ಸೀತೆ ಅಯೋಧ್ಯೆಗೆ ಕಾಲಿಟ್ಟಿದ್ದಾರೆ. ಈ ಸೀತೆ ಬೇರಾರೂ ಅಲ್ಲ. 80ರ ದಶಕದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇಡೀ ದೇಶವನ್ನು ಭಕ್ತಿಯ ಭಾವಪರವಶತೆಯಲ್ಲಿ ಮುಳುಗಿಸಿದ 'ರಾಮಾಯಣ' ಧಾರಾವಾಹಿಯ ಸೀತಾ ಪಾತ್ರಧಾರಿ ದೀಪಿಕಾ ಚಿಖಾಲಿಯಾ. ದೂರದರ್ಶನದಲ್ಲಿ ಪ್ರಸಾರವಾದ ರಮಾನಂದ ಸಾಗರ್ ನಿರ್ದೇಶನದ ಜನಪ್ರಿಯ ಧಾರಾವಾಹಿ ತೆರೆ ಕಂಡು 37 ವರ್ಷಗಳಾದರೂ, ಈಗಲೂ ದೀಪಿಕಾ ಅವರನ್ನು ದೇಶದಾದ್ಯಂತ ಜನರು ಸೀತಾದೇವಿ ಎಂದೇ ಪರಿಗಣಿಸುತ್ತಿದ್ದಾರೆ. ರಾಮಮಂದಿರ ಉದ್ಘಾಟನಾ ಸಮಾರಂಭಕ್ಕಾಗಿ ಇವರು ಇದೀಗ ಅಯೋಧ್ಯೆಗೆ ಆಗಮಿಸಿದ್ದು, ಅಲ್ಲಿನ ಜನರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ಸೀತೆಯ ಪಾತ್ರಕ್ಕೆ ನನ್ನ ಹಿನ್ನೆಲೆ ಚೆನ್ನಾಗಿದೆ ಎಂದು ಅವರು ಇದೇ ವೇಳೆ ಭಾವುಕರಾದರು. ರಮಾನಂದ್ ಸಾಗರ್ ಅವರೊಂದಿಗೆ ಎರಡು ಧಾರಾವಾಹಿಗಳನ್ನು ಮಾಡುತ್ತಿದ್ದೆ. ಬಂಗಲೆಯೊಂದರಲ್ಲಿ ಶೂಟಿಂಗ್ ನಡೆಯುತ್ತಿತ್ತು. ಒಂದಿನ ಅನೇಕ ಮಕ್ಕಳು ಬಂದರು. ರಾಮಾಯಣ ಎಂಬ ಅದ್ಧೂರಿ ಧಾರಾವಾಹಿಯ ಲವಕುಶ ಪಾತ್ರಗಳ ಸ್ಕ್ರೀನ್ ಟೆಸ್ಟ್‌ಗೆ ಅವರೆಲ್ಲ ಬಂದಿರುವುದು ಗೊತ್ತಾಯಿತು. ಆಶ್ಚರ್ಯವೆಂದರೆ, ಸ್ವಲ್ಪ ದಿನಗಳ ನಂತರ ನನಗೂ ಕರೆ ಬಂತು. ಸ್ಕ್ರೀನ್ ಟೆಸ್ಟ್‌ಗೆ ಹೋಗಿದ್ದಾಗ ಅಲ್ಲಿ ಅನೇಕ ಹುಡುಗಿಯರಿದ್ದರು. ಅವರನ್ನು ನೋಡಿ ನನಗೆ ಅವಕಾಶ ಸಿಗುತ್ತೋ, ಇಲ್ಲವೋ ಎಂಬ ಭಯ ಕಾಡುತ್ತಿತ್ತು. ಒಂದಲ್ಲ, ಎರಡಲ್ಲ ಐದು ಸ್ಕ್ರೀನ್ ಟೆಸ್ಟ್‌ಗಳ ನಂತರ ಅಂತಿಮವಾಗಿ ನಾನು ಆಯ್ಕೆಯಾದೆ ಎಂದು ದೀಪಿಕಾ ಹೇಳಿದರು.
ಬ್ರಹ್ಮರ್ಷಿ ವಿಶ್ವಾಮಿತ್ರ ಚಿತ್ರದಲ್ಲಿಯೂ ನಟಿಸಿದ್ದೇನೆ: ಹುಟ್ಟಿದ್ದು ಮುಂಬೈನಲ್ಲಿ. ಬಾಲ್ಯದಿಂದಲೂ ನಟಿಯಾಗುವ ಆಸೆ ಇತ್ತು. ಒಂಬತ್ತನೇ ತರಗತಿಯಲ್ಲಿರುವಾಗಲೇ 'ರಾಜಶ್ರೀ ಪ್ರೊಡಕ್ಷನ್ಸ್'ನಿಂದ ನಾಯಕಿಯಾಗಿ ಅವಕಾಶ ಸಿಕ್ಕಿತು. ಇದಕ್ಕೆ ನನ್ನ ತಂದೆ ಮೊದಲು ಒಪ್ಪಲಿಲ್ಲ. ಬಳಿಕ ಒಪ್ಪಿಕೊಂಡರು. ಆ ಚಿತ್ರದ ಹೆಸರು 'ಸನ್ ಮೇರಿ ಲೈಲಾ'. ನಂತರ ಬಾಲಿವುಡ್ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಜೊತೆ ಮೂರು ಸಿನಿಮಾಗಳಲ್ಲಿ ನಟಿಸಿದ್ದೇನೆ ಎಂದರು.
ಪ್ರಾದೇಶಿಕ ಭಾಷೆಗಳಲ್ಲೂ ಸಾಕಷ್ಟು ಪಾತ್ರಗಳನ್ನು ಮಾಡಿದ್ದೇನೆ. ಎನ್.ಟಿ.ರಾಮರಾವ್ ನಿರ್ದೇಶನದ ತೆಲುಗು ಚಿತ್ರ ಬ್ರಹ್ಮರ್ಷಿ ವಿಶ್ವಾಮಿತ್ರದಲ್ಲಿ ಚಂದ್ರಮತಿ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆದರೆ, ಸೀತೆಯ ಪಾತ್ರ ನನ್ನ ಬದುಕು ಬದಲಿಸಿತು. ದೇಶದಲ್ಲಿ ಎಲ್ಲೇ ಹೋದರೂ ನನ್ನನ್ನು ಸೀತಾದೇವಿ ಎಂದು ಪೂಜಿಸುತ್ತಿದ್ದರು. ಕಾಲಿಗೆ ಬಿದ್ದು ನಮಸ್ಕರಿಸುತ್ತಿದ್ದರು. ನನಗಿಂತ ಹಿರಿಯರೂ ಸಹ ನನಗೆ ನಮಸ್ಕರಿಸುತ್ತಿದ್ದರು. ಅವರಿಗೆ ನಾನು ನಟಿಯಾಗಿ ಅಲ್ಲ ಸೀತಾದೇವಿಯಾಗಿ ಕಾಣಿಸಿಕೊಳ್ಳುತ್ತಿದ್ದೆ ಎಂದು ತಿಳಿದಾಗ ನನ್ನ ಭಯ ಮಾಯವಾಯಿತು ಎಂದು ಹೇಳಿದರು.