ಸೂರತ್ (ಗುಜರಾತ್) :ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಶಾರ್ಜಾ - ಸೂರತ್ ವಿಮಾನ ಬುಧವಾರ ರಾತ್ರಿ 11:15 ರ ಸುಮಾರಿಗೆ ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ವಿಮಾನವು 180 ಸೀಟುಗಳನ್ನು ಹೊಂದಿತ್ತು. ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಂದ ಬಂದ ಮಾಹಿತಿ ಪ್ರಕಾರ, ವಿಮಾನದಲ್ಲಿ 160 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಲ್ಯಾಂಡಿಂಗ್ ನಂತರ, ವಿಮಾನವು ಏಪ್ರನ್ ಪ್ರದೇಶಕ್ಕೆ ಹೋಗುತ್ತಿದ್ದಾಗ ರನ್‌ವೇ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ. ಆದರೆ, ವಿಮಾನದ ರೆಕ್ಕೆಗೆ ಹಾನಿಯಾಗಿದೆ. ಇದೀಗ ನಾಳೆ ಅಂದರೆ ಶನಿವಾರದಿಂದ ಮತ್ತೆ ಪ್ರಯಾಣಿಕರಿಗೆ ವಿಮಾನ ಹಾರಾಟ ಆರಂಭವಾಗಲಿದೆ ಎಂಬುದು ತಿಳಿದು ಬಂದಿದೆ.
ಅಪಘಾತದ ಸಂಪೂರ್ಣ ವರದಿ ಸಿದ್ಧಪಡಿಸಿ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರಿಗೆ ಸಲ್ಲಿಸಲಾಗಿದೆ. ಈಗ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ತನಿಖೆಯ ನಂತರ ವಿಮಾನ ಕಾರ್ಯಾಚರಣೆಗೆ ಅನುಮತಿ ನೀಡಲಾಗುವುದು. ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಮಾನಾಂತರ ಟ್ಯಾಕ್ಸಿ ಟ್ರ್ಯಾಕ್ ನಿರ್ಮಿಸುವ ಪ್ರಕ್ರಿಯೆ ಭರದಿಂದ ಸಾಗುತ್ತಿದೆ ಎಂದು ವಿಮಾನ ನಿಲ್ದಾಣದ ಅಧಿಕೃತ ಮೂಲಗಳು ಬಹಿರಂಗಪಡಿಸಿವೆ. ಈ ಕೆಲಸಕ್ಕೆ ಮಣ್ಣು ಸಾಗಿಸಲು ಲಾರಿಗಳನ್ನು ಬಳಸಲಾಗುತ್ತಿದೆ. ಈ ಮಧ್ಯೆ ನಿನ್ನೆ ರಾತ್ರಿ ಚಾಲಕ ಟ್ರಕ್ ಅನ್ನು ರನ್‌ವೇ ಬದಿಯಲ್ಲಿ ಬಿಟ್ಟಿದ್ದರು. ಅದಕ್ಕೆ ವಿಮಾನ ಡಿಕ್ಕಿ ಹೊಡೆದಿದೆ ಎಂಬುದಾಗಿ ತಿಳಿದು ಬಂದಿದೆ.