ನವದೆಹಲಿ:ದೇಶದಲ್ಲಿ ಎನ್ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಕೇಂದ್ರ ಸಚಿವರು ತಮ್ಮ ತಮ್ಮ ಇಲಾಖೆಗಳಲ್ಲಿ ಸಕ್ರಿಯರಾಗಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ 3.0 ಕೇಂದ್ರ ಸರ್ಕಾರದ ಸಚಿವರಾಗಿರುವ ಅಮಿತ್ ಶಾ, ಶಿವರಾಜ್ ಸಿಂಗ್ ಚೌಹಾಣ್, ಜೈ ಶಂಕರ್, ವಿ.ಸೋಮಣ್ಣ, ಜಿತೇಂದ್ರ ಸಿಂಗ್, ಮನೋಹರ್ ಲಾಲ್ ಖಟ್ಟರ್, ಕಿರಣ್ ರಿಜಿಜು, ಸುರೇಶ್ ಗೋಪಿ, ಪ್ರಲ್ಹಾದ್ ಜೋಶಿ ಸೇರಿದಂತೆ ಹಲವರು ಇಂದು(ಜೂ.11) ತಮ್ಮ ಇಲಾಖೆಯ ಕಚೇರಿಗೆ ತೆರಳಿ ಅಧಿಕಾರ ಸ್ವೀಕಾರ ಮಾಡಿದರು. ಸರ್ಕಾರ ರಚನೆಯಾದ ಎರಡನೇ ದಿನದಿಂದಲೇ ಹಲವು ಸಚಿವರು ಇಲಾಖೆಯ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಅಮಿತ್ ಶಾ:ಸತತ ಎರಡನೇ ಅವಧಿಗೆ ಗೃಹ ಸಚಿವರಾಗಿರುವ ಅಮಿತ್ ಶಾ ಅವರು ಇಂದು ಗೃಹ ಕಚೇರಿಗೆ ತೆರಳಿ ಅಧಿಕಾರಿಗಳಿಂದ ಸ್ವಾಗತ ಪಡೆದರು. ರಾಷ್ಟ್ರಕ್ಕಾಗಿ ಬಲಿದಾನ ನೀಡಿದ ಪೊಲೀಸ್ ಸಿಬ್ಬಂದಿಯ ಸ್ಮರಣಾರ್ಥ ನಿರ್ಮಿಸಲಾದ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಗೃಹ ಸಚಿವರು ಅಧಿಕಾರ ಸ್ವೀಕರಿಸಿದರು. ದೇಶದ ಭದ್ರತೆಗೆ ತೊಡಕಾಗಿರುವ ಭಯೋತ್ಪಾದನೆ, ದಂಗೆ ಮತ್ತು ನಕ್ಸಲಿಸಂ ವಿರುದ್ಧ ಹೋರಾಡಿ ಭಾರತವನ್ನು ಭದ್ರಕೋಟೆಯಾಗಿ ನಿರ್ಮಿಸೋಣ ಎಂದು ಅವರು ಕರೆ ನೀಡಿದರು.
ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ಪ್ರಧಾನಿ ಮೋದಿ ಅವರ ಸಾರಥ್ಯದಲ್ಲಿ ಗೃಹ ಸಚಿವಾಲಯದ ಉಸ್ತುವಾರಿಯನ್ನು ಪುನಃ ವಹಿಸಿಕೊಂಡಿದ್ದೇನೆ. ಗೃಹ ಸಚಿವಾಲಯವು ಯಾವಾಗಲೂ ರಾಷ್ಟ್ರ ಮತ್ತು ಜನರ ಭದ್ರತೆಗೆ ಬದ್ಧವಾಗಿರುತ್ತದೆ" ಎಂದಿದ್ದಾರೆ.