ಮುಂಬೈ(ಮಹಾರಾಷ್ಟ್ರ):ದೆಹಲಿಯಲ್ಲಿ ನಡೆದ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಎನ್‌ಸಿಪಿ ನಾಯಕ (ಎಸ್ಪಿ) ಶರದ್ ಪವಾರ್ ಅವರು ಸನ್ಮಾನಿಸಿದ್ದಕ್ಕೆ ಉದ್ಧವ್ ಠಾಕ್ರೆ ಬಣದ ಶಿವಸೇನೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
"ಬಾಳಾ ಠಾಕ್ರೆ ಅವರ ಶಿವಸೇನೆಯನ್ನು ವಿಭಜಿಸಿ ದ್ರೋಹ ಬಗೆದ ವ್ಯಕ್ತಿಗೆ I.N.D.I.A ಕೂಟದ ಭಾಗವಾಗಿರುವ ಶರದ್ ಪವಾರ್ ಅವರು ಸನ್ಮಾನಿಸಿದ್ದು ಸರಿಯಲ್ಲ. ಇದನ್ನು ಮಹಾರಾಷ್ಟ್ರದ ಜನರು ಸಹಿಸುವುದಿಲ್ಲ" ಎಂದು ಪಕ್ಷ ಹೇಳಿದೆ.
ಈ ಬಗ್ಗೆ ಮಾತನಾಡಿರುವ ಸಂಸದ ಸಂಜಯ್ ರಾವುತ್, "ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ನ ಮಹಾವಿಕಾಸ್ ಅಘಾಡಿ ಸರ್ಕಾರವನ್ನು ಕೆಡವಿದ ಮತ್ತು ಅಖಂಡ ಶಿವಸೇನೆ ವಿಭಜಿಸಿದ ವ್ಯಕ್ತಿಗೆ ಶರದ್ ಪವಾರ್ ಅವರು ಅಭಿನಂದಿಸಿದ್ದು ಒಪ್ಪಲಾಗದು. ಮೇಲಾಗಿ, ಅವರು ಕಾರ್ಯಕ್ರಮಕ್ಕೇ ಹೋಗಬಾರದಿತ್ತು" ಎಂದು ಹೇಳಿದರು.
"ಪವಾರ್ ಅವರು ನಿನ್ನೆ ಸನ್ಮಾನಿಸಿದ್ದು ಶಿಂಧೆಯನ್ನಲ್ಲ, ಬಿಜೆಪಿಯನ್ನು. ಮಹಾರಾಷ್ಟ್ರದ ಶತ್ರು ಎಂದು ಪರಿಗಣಿಸುವ ವ್ಯಕ್ತಿಗೆ ಇಂತಹ ಗೌರವ ನೀಡುವುದು ಮರಾಠಿಗರ ಹೆಮ್ಮೆಗೆ ಕಳಂಕ. ಅವರ ಭಾವನೆಗೆ ನೋವುಂಟು ಮಾಡಿದಿರಿ. ಇಂತಹ ರಾಜಕೀಯವು ರಾಜ್ಯದ ಜನರಿಗೆ ಇಷ್ಟವಾಗಲಿಲ್ಲ" ಎಂದರು.