ಶ್ರೀನಗರ, ಜಮ್ಮು ಕಾಶ್ಮೀರ :ಶನಿವಾರ ಭಾರತೀಯ ವಾಯುಸೇನೆಯ ವಾಹನಗಳ ಮೇಲೆ ದಾಳಿ ನಡೆಸಿದ ಉಗ್ರರನ್ನು ಸದೆ ಬಡಿಯಲು ಪೂಂಚ್‌ನಲ್ಲಿ ಶೋಧ ಕಾರ್ಯಾಚರಣೆ 6ನೇ ದಿನಕ್ಕೆ ಕಾಲಿಟ್ಟಿದ್ದು, ಸೇನೆ, ಅರೆ ಸೇನಾ ಪಡೆಗಳು, ಜಮ್ಮು ಕಾಶ್ಮೀರ ಪೊಲೀಸರು ಮತ್ತು ಪೊಲೀಸರ ವಿಶೇಷ ತಂಡವು ಆರನೇ ದಿನವೂ ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ. ದಟ್ಟವಾದ ಕಾಡುಗಳಲ್ಲಿ ಮತ್ತು ದಾಳಿ ನಡೆದ ಸ್ಥಳದ ಸಮೀಪ ಇರುವ ವಸತಿ ಪ್ರದೇಶಗಳಲ್ಲಿ ಕಾರ್ಯಾಚರಣೆ ಮುಂದುವರೆದಿದೆ.
ಏತನ್ಮಧ್ಯೆ, ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ವಾಯುಪಡೆಯ ಬೆಂಗಾವಲು ಪಡೆ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿರುವ ಮೂವರು ಉಗ್ರಗಾಮಿಗಳ ಛಾಯಾಚಿತ್ರಗಳನ್ನು ಸಿಸಿಟಿವಿ ದೃಶ್ಯಗಳಿಂದ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕಾರ್ಪೋರಲ್ ವಿಕ್ಕಿ ಪಹಾಡೆ ಕೊಲ್ಲಲ್ಪಟ್ಟಿದ್ದರು ಮತ್ತು ಅವರ ನಾಲ್ವರು ಸಹೋದ್ಯೋಗಿಗಳು ಗಾಯಗೊಂಡಿದ್ದರು.