ನವದೆಹಲಿ:ಕ್ಯಾಂಪಸ್‌ನಲ್ಲಿ ಹಿಜಾಬ್, ಬುರ್ಖಾ, ಕ್ಯಾಪ್ ಮತ್ತು ನಿಖಾಬ್ ಧರಿಸುವುದನ್ನು ನಿಷೇಧಿಸಿ ಮುಂಬೈನ ಖಾಸಗಿ ಕಾಲೇಜು ಹೊರಡಿಸಿದ್ದ ಸುತ್ತೋಲೆಗೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡಿತು.
ವಿದ್ಯಾರ್ಥಿನಿಯರು ತಮ್ಮ ಇಷ್ಟದ ಬಟ್ಟೆಗಳನ್ನು ಧರಿಸುವ ಸ್ವಾತಂತ್ರ್ಯ ಹೊಂದಿರಬೇಕು. ಶಿಕ್ಷಣ ಸಂಸ್ಥೆಗಳು ಡ್ರೆಸ್ ಕೋಡ್ ಅನ್ನು ಒತ್ತಾಯಿಸುವಂತಿಲ್ಲ ಎಂದ ಕೋರ್ಟ್, ಎನ್.ಜಿ.ಆಚಾರ್ಯ ಮತ್ತು ಡಿ.ಕೆ.ಮರಾಠೆ ಕಾಲೇಜು ನಡೆಸುತ್ತಿರುವ ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿಗೆ ನೋಟಿಸ್ ಜಾರಿ ಮಾಡಿತು. ಅಲ್ಲದೇ, ಈ ಬಗ್ಗೆ ನವೆಂಬರ್ 18ರೊಳಗೆ ಪ್ರತಿಕ್ರಿಯೆ ನೀಡುವಂತೆ ಆದೇಶಿಸಿತು.
ತಿಲಕ, ಬಿಂದಿಯನ್ನೇಕೆ ನಿಷೇಧಿಸಲಿಲ್ಲ?: ವಿದ್ಯಾರ್ಥಿನಿಯರು ತಮ್ಮ ಆಯ್ಕೆಯ ಬಟ್ಟೆಗಳನ್ನು ಧರಿಸಲು ಅವಕಾಶ ನೀಡಬೇಕು. ಕಾಲೇಜುಗಳು ಡ್ರೆಸ್ ಕೋಡ್ ಕುರಿತು ಒತ್ತಾಯ ಮಾಡುವಂತಿಲ್ಲ. ದೇಶದಲ್ಲಿ ಹಲವು ಧರ್ಮಗಳಿವೆ ಎಂಬುದು ಗೊತ್ತಿದ್ದೂ ದಿಢೀರ್ ಆಗಿ ಇಂತಹ ಕ್ರಮಕ್ಕೆ ಮುಂದಾಗಿರುವುದು ದುರದೃಷ್ಟಕರ. ವಿದ್ಯಾರ್ಥಿಗಳ ಹೆಸರುಗಳು ಅವರ ಧಾರ್ಮಿಕ ಗುರುತನ್ನು ಬಹಿರಂಗಪಡಿಸುವುದಿಲ್ಲವೇ?. ಹಾಗಾದರೆ, ಇನ್ನು ಮುಂದೆ ನೀವು ಅವರನ್ನು ಸಂಖ್ಯೆ ರೀತಿಯಲ್ಲಿ ಕರೆಯುತ್ತೀರಾ?. ವಿದ್ಯಾರ್ಥಿಗಳ ಧಾರ್ಮಿಕ ನಂಬಿಕೆಗಳನ್ನು ಬಹಿರಂಗಪಡಿಸಬಾರದು ಎಂಬ ಉದ್ದೇಶದಿಂದ ಕಾಲೇಜು ತಿಲಕ ಮತ್ತು ಬಿಂದಿಗಳನ್ನು ಏಕೆ ನಿಷೇಧಿಸಲಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠ ಪ್ರಶ್ನಿಸಿತು.