ನವದೆಹಲಿ: ಬೆಂಗಳೂರಿನ ವಕೀಲರ ಸಂಘದ ಆಡಳಿತ ಮಂಡಳಿಯಲ್ಲಿನ ಖಜಾಂಚಿ ಹುದ್ದೆಯನ್ನು ಮಹಿಳಾ ವಕೀಲರಿಗೆ ಮೀಸಲಿಡುವಂತೆ ಸುಪ್ರೀಂ ಕೋರ್ಟ್ ಇಂದು ಆದೇಶಿಸಿದೆ.
ಬೆಂಗಳೂರಿನ ವಕೀಲ ಸಂಘದ ಆಡಳಿತ ಮಂಡಳಿಯಲ್ಲಿ ಮಹಿಳಾ ವಕೀಲರಿಗೆ ಶೇ.33ರಷ್ಟು ಮೀಸಲಾತಿ ನೀಡುವಂತೆ ಕೋರಿ ಕರ್ನಾಟಕ ಮಹಿಳಾ ವಕೀಲರ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಎನ್.ಕೋಟೇಶ್ವರ್ ಸಿಂಗ್ ಅವರಿದ್ದ ಪೀಠ ಈ ಆದೇಶ ನೀಡಿದೆ. ಸಂಘದ ಆಡಳಿತ ಮಂಡಳಿಯಲ್ಲಿ ವಕೀಲೆಯರ ಪ್ರಾತಿನಿಧ್ಯ ಇರುವಂತೆ ನೋಡಿಕೊಳ್ಳಬೇಕು ಎಂದೂ ಸುಪ್ರೀಂ ಹೇಳಿದೆ.
ಸಂವಿಧಾನದ 142ನೇ ವಿಧಿಯ ಅಡಿ ತನ್ನ ಅಧಿಕಾರವನ್ನು ಚಲಾಯಿಸಿದ ಪೀಠ, ಫೆಬ್ರವರಿ 2ರಂದು ಬೆಂಗಳೂರಿನ ವಕೀಲರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಿಗದಿಯಾಗಿದ್ದು, ಹಾಗೂ ನಾಮನಿರ್ದೇಶನ ಪ್ರಕ್ರಿಯೆ ಮುಗಿದಿರುವುದನ್ನು ಗಮನಿಸಿತು.
142ನೇ ವಿಧಿಯಡಿ ವಿವಿಧ ಚುನಾಯಿತ ವಕೀಲರ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಒದಗಿಸುವುದಕ್ಕೆ ಇದು ಸರಿಯಾದ ಸಮಯವಾಗಿದೆ. ಸಂವಿಧಾನದ 142 ನೇ ವಿಧಿಯ ಅಡಿ ನಮ್ಮ ಅಧಿಕಾರಗಳನ್ನು ಚಲಾಯಿಸುವುದು ಸೂಕ್ತ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ ಪೀಠ, ಖಜಾಂಚಿ ಹುದ್ದೆಯನ್ನು ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಮೀಸಲಿಡಬೇಕು ಎಂದು ಹೇಳಿದೆ. ಸಂಘದ ಮಹಿಳಾ ಅಭ್ಯರ್ಥಿಗೆ ಸ್ಥಾನಗಳನ್ನು ನಿಗದಿಪಡಿಸುವ ಜ್ಞಾಪಕ ಪತ್ರ ಮತ್ತು ಬೈ-ಲಾಗಳಲ್ಲಿ ಯಾವುದೇ ಸ್ಪಷ್ಟ ನಿಬಂಧನೆಗಳಿಲ್ಲ ಎನ್ನುವುದನ್ನು ಪೀಠ ಗಮನಿಸಿದೆ.
ನ್ಯಾಯಮೂರ್ತಿ ಕಾಂತ್ ನೇತೃತ್ವದ ಪೀಠ, ಚುನಾವಣೆಯ ಮೇಲ್ವಿಚಾರಣೆಗೆ ರಚಿಸಲಾದ ಉನ್ನತಾಧಿಕಾರ ಸಮಿತಿ ಹಾಗೂ ವಕೀಲರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸುವ ಮುಖ್ಯ ಚುನಾವಣಾ ಅಧಿಕಾರಿಗೆ, ನಾಮಪತ್ರಗಳನ್ನು ಆಹ್ವಾನಿಸುವ ದಿನಾಂಕವನ್ನು ವಿಸ್ತರಿಸುವಂತೆ ನಿರ್ದೇಶಿಸಿದೆ. ಮಾತ್ರವಲ್ಲದೇ ಸಾಧ್ಯ ಇದ್ದರೆ ಚುನಾವಣೆಯನ್ನೂ ಕೆಲವು ದಿನಗಳವೆರೆಗೆ ಮುಂದೂಡಬೇಕು ಎಂದು ಹೇಳಿದೆ.
ಇದೇ ವೇಳೆ, ವಕೀಲರ ಸಂಘದ ಆಡಳಿತ ಮಂಡಳಿಯಲ್ಲಿ ಯುವ ವಕೀಲರ ಹೆಚ್ಚಿನ ಭಾಗವಹಿಸುವಿಕೆಗೆ ಅವಕಾಶ ನೀಡಲು 10 ವರ್ಷಗಳ ಅನುಭವದ ಮಾನದಂಡವನ್ನು ಸಡಿಲಿಸುವಂತೆ ವಕೀಲರು ಪೀಠಕ್ಕೆ ಒತ್ತಾಯಿಸಿದರು. ಈ ವಾದವನ್ನು ಒಪ್ಪಿಕೊಂಡ ಪೀಠವು, ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ಚುನಾವಣೆ ಪ್ರಕರಣದಲ್ಲಿ ಜಾರಿಗೆ ತರಲು ಆದೇಶಿಸಿದ್ದಂತೆ, ಡಿಸೆಂಬರ್ 19 ರಂದು ತನ್ನ ಅವಧಿಯನ್ನು ಪೂರ್ಣಗೊಳಿಸಿದ ಬೆಂಗಳೂರಿನ ವಕೀಲರ ಸಂಘದಲ್ಲಿಯೂ ಒಂದು ವ್ಯವಸ್ಥೆ ಜಾರಿಗೆ ತರಲು ಆದೇಶಿಸಿತು.
ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ಪ್ರಕರಣದಲ್ಲಿ ನೀಡಿದಂತೆ ಬೆಂಗಳೂರು ವಕೀಲರ ಸಂಘದಲ್ಲಿಯೂ ಮಹಿಳಾ ಮೀಸಲಾತಿಯ ನಿರ್ದೇಶನಗಳನ್ನು ಜಾರಿಗೆ ತರುವಂತೆ ಕೋರಿ ಮಹಿಳಾ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ಕಳೆದ ವರ್ಷ, ಸುಪ್ರೀಂ ಕೋರ್ಟ್ ಖಜಾಂಚಿ ಹುದ್ದೆ ಸೇರಿದಂತೆ ಮಹಿಳಾ ವಕೀಲರಿಗೆ ಸ್ಥಾನಗಳನ್ನು ಕಾಯ್ದಿರಿಸುವಂತೆ ನಿರ್ದೇಶನ ನೀಡಿತ್ತು. ಇತ್ತೀಚೆಗೆ, ಸುಪ್ರೀಂ ಕೋರ್ಟ್ ದೆಹಲಿ ಮಾರಾಟ ತೆರಿಗೆ ಬಾರ್ ಅಸೋಸಿಯೇಷನ್ ಮತ್ತು ದೆಹಲಿ ತೆರಿಗೆ ಬಾರ್ ಅಸೋಸಿಯೇಷನ್‌ನ ಕಾರ್ಯಕಾರಿ ಸಮಿತಿಯಲ್ಲಿ ಖಜಾಂಚಿ ಹುದ್ದೆ ಮತ್ತು ಮಹಿಳಾ ವಕೀಲರಿಗೆ ಶೇ. 30 ರಷ್ಟು ಸ್ಥಾನಗಳನ್ನು ಕಾಯ್ದಿರಿಸುವಂತೆ ನಿರ್ದೇಶನ ನೀಡಿತ್ತು. ಜನವರಿ 20 ರಂದು ಸುಪ್ರೀಂ ಕೋರ್ಟ್ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಬಾರ್ ಅಸೋಸಿಯೇಷನ್ ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಶೇ. 33 ರಷ್ಟು ಸ್ಥಾನಗಳನ್ನು ಮೀಸಲಿಡುವಂತೆ ನಿರ್ದೇಶನ ನೀಡಿತ್ತು.
ಇದನ್ನೂ ಓದಿ:ರಾಜೋನಾ ಮರಣದಂಡನೆ ಕ್ಷಮಾದಾನ ಅರ್ಜಿ; ಕೇಂದ್ರಕ್ಕೆ ಕೊನೆಯ ಅವಕಾಶ ನೀಡಿದ ಸುಪ್ರೀಂ ಕೋರ್ಟ್