ನವದೆಹಲಿ:ಚುನಾವಣಾ ಆಯೋಗಕ್ಕೆ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ನ್ಯಾಯಮೂರ್ತಿಗಳ ಇರುವಿಕೆ ಕಡ್ಡಾಯವಲ್ಲ. ಕೇಂದ್ರ ಸರ್ಕಾರ ಇಬ್ಬರು ಹೊಸ ಆಯುಕ್ತರ ನೇಮಕ ಮಾಡಿದ್ದರಲ್ಲಿ ದೋಷವಿಲ್ಲ ಎಂದು ಸುಪ್ರಿಂ ಕೋರ್ಟ್ ಗುರುವಾರ ಹೇಳಿದೆ.
ಚುನಾವಣಾ ಆಯೋಗಕ್ಕೆ ಹೊಸ ಆಯುಕ್ತರನ್ನು ತರಾತುರಿಯಲ್ಲಿ ನೇಮಕ ಮಾಡಿದ್ದನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಆಯುಕ್ತರ ಆಯ್ಕೆಯಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಸಮಿತಿಗೆ ಹೆಚ್ಚಿನ ಸಮಯ ನೀಡಬೇಕಿತ್ತು ಎಂದು ಹೇಳಿತು. ಜೊತೆಗೆ ಆಯ್ಕೆ ವಿರುದ್ಧ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠವು ತಿರಸ್ಕರಿಸಿತು.
ಚುನಾವಣಾ ಆಯುಕ್ತರ ನೇಮಕಾತಿಗಾಗಿ ಶೋಧನಾ ಸಮಿತಿಗೆ ಅಭ್ಯರ್ಥಿಗಳ ಹಿನ್ನೆಲೆಯನ್ನು ಅರಿಯಲು ಹೆಚ್ಚಿನ ಸಮಯ ನೀಡಬೇಕಿತ್ತು. 2023ರಲ್ಲಿ ಸಾಂವಿಧಾನಿಕ ಪೀಠವು ಚುನಾವಣಾ ಆಯುಕ್ತರ ನೇಮಕಕ್ಕೆ ಆಯ್ಕೆ ಸಮಿತಿಯಲ್ಲಿ ನ್ಯಾಯಾಂಗದ ಸದಸ್ಯರು ಕಡ್ಡಾಯವಾಗಿ ಇರಬೇಕೆಂದು ಎಲ್ಲಿಯೂ ಹೇಳಿಲ್ಲ ಎಂದಿತು.
ಸರ್ಕಾರದ ನಿರ್ಧಾರ ತಡೆಯಲ್ಲ:ಹೀಗಾಗಿ ನೇಮಕಾತಿಗೆ ತಡೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ವಜಾಗೊಳಿಸುತ್ತಿದ್ದೇವೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿ, ಸೇವಾ ಷರತ್ತುಗಳು ಮತ್ತು ಕಚೇರಿ ನಿಯಮಗಳು ಕಾಯಿದೆ-2023 ರ ಸಿಂಧುತ್ವವನ್ನು ಪ್ರಶ್ನಿಸುವ ಮುಖ್ಯ ಅರ್ಜಿಗಳನ್ನು ಪರಿಶೀಲಿಸುವುದಾಗಿ ಪೀಠ ಹೇಳಿತು.
ಕೇಂದ್ರ ಸರ್ಕಾರದ ಮಾಡಿದ ಶಾಸನವನ್ನು ತಡೆಹಿಡಿಯಲಾಗುವುದಿಲ್ಲ ಅಥವಾ ಅದರ ಕಾರ್ಯಾಚರಣೆಯನ್ನು ಅಮಾನತುಗೊಳಿಸುವುದಿಲ್ಲ. ಇದು ಅವ್ಯವಸ್ಥೆ ಮತ್ತು ಅನಿಶ್ಚಿತತೆಗೆ ಕಾರಣವಾಗುತ್ತದೆ. ಮಧ್ಯಂತರ ಆದೇಶದ ಮೂಲಕ ತಡೆ ನೀಡಲು ಸಾಧ್ಯವಿಲ್ಲ. ಹೊಸ ಚುನಾವಣಾ ಆಯುಕ್ತರ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದು ಕೋರ್ಟ್ ಹೇಳಿದೆ.
ಇಬ್ಬರು ನೂತನ ಚುನಾವಣಾ ಆಯುಕ್ತರ ನೇಮಕಕ್ಕೆ ಅನುಸರಿಸಿದ ವೇಗದ ಬಗ್ಗೆ ಸುಪ್ರೀಂ ಕೋರ್ಟ್ ಕೇಂದ್ರವನ್ನು ಪ್ರಶ್ನಿಸಿತು. ಚುನಾವಣಾ ಆಯುಕ್ತರನ್ನು ನೇಮಕ ಮಾಡಿದ್ದರ ಬಗ್ಗೆ ಆಕ್ಷೇಪವಿಲ್ಲ. ಆದರೆ, ಅಷ್ಟು ಆತುರಾತುರವಾಗಿ ನೇಮಕ ಮಾಡಿದ್ದೇಕೆ. ಆಯ್ಕೆ ಸಮಿತಿಗೆ ಹೆಚ್ಚಿನ ಸಮಯವನ್ನು ನೀಡಬೇಕಾಗಿತ್ತಲ್ಲವೇ ಎಂದು ಪ್ರಶ್ನಿಸಿತು.
ಕಾಯ್ದೆ ಸಿಂಧುತ್ವದ ಪ್ರಶ್ನೆ:ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿ, ಸೇವಾ ಷರತ್ತುಗಳು ಮತ್ತು ಕಚೇರಿ ನಿಯಮಗಳ ಕಾಯ್ದೆ- 2023 ರ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳನ್ನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಈ ಬಗ್ಗೆ 6 ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಇದೇ ವೇಳೆ ಸೂಚಿಸಿತು.
ನಿವೃತ್ತ ಐಎಎಸ್ ಅಧಿಕಾರಿಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರನ್ನು ಇತ್ತೀಚೆಗೆ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ಏಪ್ರಿಲ್ 19 ರಿಂದ 7 ಹಂತದಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ:ನೂತನ ಚುನಾವಣಾ ಆಯುಕ್ತರ ನೇಮಕ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ