ನವದೆಹಲಿ:ಇಂಟರ್ಮೀಡಿಯಟ್ ಅಥವಾ 12ನೇ ತರಗತಿಯ ನಂತರ ನೇರವಾಗಿ ಮೂರು ವರ್ಷಗಳ ಕಾನೂನು ಕೋರ್ಸ್ (ಎಲ್‌ಎಲ್‌ಬಿ) ಮುಂದುವರಿಸುವ ಆಯ್ಕೆ ಕೋರಿ ಸಲ್ಲಿಸಲಾದ ಅರ್ಜಿ ಬಗ್ಗೆ ಸುಪ್ರೀಂ ಕೋರ್ಟ್ ಇಂದು ಅಸಮಾಧಾನ ವ್ಯಕ್ತಪಡಿಸಿದೆ. ಪ್ರಸ್ತುತ ಇರುವ ಕೋರ್ಸ್ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟು ಪಿಐಎಲ್ ತಿರಸ್ಕರಿಸಿತು.
ಅಸ್ತಿತ್ವದಲ್ಲಿರುವ 5 ವರ್ಷಗಳ ಎಲ್‌ಎಲ್‌ಬಿ ಕೋರ್ಸ್‌ಗೆ ಬದಲಾಗಿ 12ನೇ ತರಗತಿಯ ನಂತರ 3 ವರ್ಷಗಳ ಎಲ್‌ಎಲ್‌ಬಿ ಕೋರ್ಸ್ ನಡೆಸುವ ಸಾಧ್ಯತೆಯನ್ನು ಅನ್ವೇಷಿಸಲು ತಜ್ಞರ ಸಮಿತಿ ರಚಿಸುವಂತೆ ಕೇಂದ್ರ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾವನ್ನು ಕೇಳುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಲು ಕೋರ್ಟ್ ನಿರಾಕರಿಸಿದೆ. ಇದೇ ವೇಳೆ, ವಕೀಲ ವೃತ್ತಿಗೆ ಪ್ರಬುದ್ಧ ವ್ಯಕ್ತಿಗಳ ಅಗತ್ಯವಿದೆ ಎಂದಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅವರಿದ್ದ ಪೀಠ, ಐದು ವರ್ಷಗಳ ಎಲ್‌ಎಲ್‌ಬಿ (ಬ್ಯಾಚುಲರ್ ಆಫ್ ಲಾ) ಕೋರ್ಸ್ "ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ" ಮತ್ತು ಅದರಲ್ಲಿ ಗೊಂದಲವಿಲ್ಲ ಎಂದಿತು. "ಮೂರು ವರ್ಷಗಳ ಕೋರ್ಸ್ ಏಕೆ? ಅವರು ಪ್ರೌಢಶಾಲೆಯ ನಂತರ ಪ್ರಾಕ್ಟಿಸ್ (ಕಾನೂನು) ಪ್ರಾರಂಭಿಸಬಹುದು. ನನ್ನ ಪ್ರಕಾರ 5 ವರ್ಷ ತುಂಬಾ ಕಡಿಮೆ. ನಮಗೆ ಪ್ರಬುದ್ಧ ಜನರು ವೃತ್ತಿಗೆ ಬರಬೇಕು. ಈ 5 ವರ್ಷಗಳ ಕೋರ್ಸ್ ತುಂಬಾ ಪ್ರಯೋಜನಕಾರಿಯಾಗಿದೆ" ಎಂದು ಪೀಠ ಹೇಳಿದೆ.