ನವದೆಹಲಿ:ಇಬ್ಭಾಗವಾಗಿರುವ ಶಿವಸೇನೆ ಪಕ್ಷ ಯಾರಿಗೆ ಸೇರಬೇಕು ಎಂಬ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಸ್ಪೀಕರ್ ರಾಹುಲ್ ನಾರ್ವೇಕರ್ ನೀಡಿದ ತೀರ್ಪಿನ ವಿರುದ್ಧ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣ ತಕರಾರು ಸಲ್ಲಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಸುಪ್ರೀಂಕೋರ್ಟ್ ಸೋಮವಾರ ನೋಟಿಸ್ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠವು ಠಾಕ್ರೆ ಬಣದ ಮನವಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನೋಟಿಸ್ ನೀಡಿದೆ. ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಎ.ಎಂ. ಸಿಂಘ್ವಿ ಅವರು ಠಾಕ್ರೆ ಬಣವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿನಿಧಿಸುತ್ತಿದ್ದಾರೆ.
ಇಂದಿನ ವಾದ ಹೀಗಿತ್ತು?:ಸಂವಿಧಾನದ 226 ನೇ ವಿಧಿಯ ಅಡಿ ಸುಪ್ರೀಂಕೋರ್ಟ್ಗೆ ನ್ಯಾಯ ಕೋರಬಹುದೇ ಅಥವಾ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಬೇಕೆ?. ಹಾಗೊಂದು ವೇಳೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದರೆ, ವಿಚಾರಣೆಯು ಇನ್ನಷ್ಟು ವಿಳಂಬವಾಗಿ ಮತ್ತೆ ಸುಪ್ರೀಂಕೋರ್ಟ್ಗೆ ಬರಲಿದೆ ಎಂದು ಕಪಿಲ್ ಸಿಬಲ್ ವಾದಿಸಿದರು. ಸ್ಪೀಕರ್ ನಿರ್ಧಾರವು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು. ಸಿಬಲ್ ವಾದವನ್ನು ಆಲಿಸಿದ ನಂತರ, ಸುಪ್ರೀಂಕೋರ್ಟ್ ಮುಖ್ಯಮಂತ್ರಿ ಶಿಂಧೆ ಮತ್ತು ಇತರ ಶಾಸಕರಿಗೆ ಎರಡು ವಾರಗಳಲ್ಲಿ ಉತ್ತರಿಸುವಂತೆ ನೋಟಿಸ್ ನೀಡಲು ಒಪ್ಪಿಕೊಂಡಿತು.
ಪಕ್ಷದ ವಿರುದ್ಧ ಬಂಡೆದ್ದ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಹತ್ತನೇ ಶೆಡ್ಯೂಲ್ನಲ್ಲಿದೆ. ಕೆಲ ಶಾಸಕರನ್ನೇ ಒಂದು ರಾಜಕೀಯ ಪಕ್ಷ ಎಂದು ಪರಿಗಣಿಸಿದರೆ, ನಿಜವಾದ ರಾಜಕೀಯ ಪಕ್ಷದ ಬಹುಪಾಲು ಶಾಸಕರ ಇಚ್ಛೆಗೆ ವಿರುದ್ಧವಾಗಿರುತ್ತದೆ. ಇದು ಸಂಪೂರ್ಣವಾಗಿ ಸಾಂವಿಧಾನಿಕ ನೀತಿಯ ವಿರುದ್ಧವಾಗಿದೆ ಎಂದು ಠಾಕ್ರೆ ಬಣ ಮನವಿಯಲ್ಲಿ ಹೇಳಿದೆ.