ನವದೆಹಲಿ:ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಕರ್ತವ್ಯ ನಿರ್ವಹಿಸುವುದಕ್ಕೆ ಯಾವುದೇ ನಿರ್ಬಂಧವಿದೆಯೇ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ, ಹೆಚ್ಚುವರ ಸಾಲಿಸಿಟರ್ ಜನರಲ್ ಐಶ್ವರ್ಯ ಬಾಟಿ ಅವರನ್ನು ಪ್ರಶ್ನಿಸಿದೆ. ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ ಮತ್ತು ಜೂನ್ 26 ರಂದು ಕೇಂದ್ರೀಯ ತನಿಖಾ ದಳ ಬಂಧನಕ್ಕೊಳಪಡಿಸಿದೆ. ಸದ್ಯ ಅವರು ಸಿಬಿಐ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು, ಕೇಜ್ರಿವಾಲ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿದೆ. ತಾವು ಜೈಲಿನಲ್ಲಿರುವುದರಿಂದ, ತಮ್ಮ ಸಹಿ ಇಲ್ಲದ ಕಾರಣ ಅರ್ಹ ಅಪರಾಧಿಗಳ ಶಿಕ್ಷೆಯ ವಿನಾಯತಿಗೆ ಸಂಬಂಧಿಸಿದ ಕಡತಗಳು ವಿಳಂಬವಾಗುತ್ತಿವೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರನ್ನು ಪ್ರಶ್ನಿಸಿದ್ದು, ಮುಖ್ಯಮಂತ್ರಿ ಜೈಲಿನಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಯಾವುದೇ ನಿರ್ಬಂಧದ ಆದೇಶವಿದೆಯೇ? ನೂರಾರು ಪ್ರಕರಣಗಳ ಮೇಲೆ ಪರಿಣಾಮ ಬೀರುವುದರಿಂದ ಅದನ್ನು ಪರಿಶೀಲಿಸಲು ಬಯಸುವುದಾಗಿ ಪೀಠ ಹೇಳಿದೆ.