ನವದೆಹಲಿ:2006 ರ ಗ್ಯಾಂಗ್‌ಸ್ಟರ್ ರಾಮ್ನಾರಾಯಣ ಗುಪ್ತಾ ಅಲಿಯಾಸ್ ಲಖನ್ ಭಯ್ಯಾ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಮುಂಬೈನ ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಪೊಲೀಸ್ ಅಧಿಕಾರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಮತ್ತು ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಶರ್ಮಾಗೆ ಜಾಮೀನು ನೀಡಲು ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ನ್ಯಾಯಾಲಯದಲ್ಲಿ ಮಹಾರಾಷ್ಟ್ರ ಸರ್ಕಾರದ ಪರ ವಾದ ಮಂಡಿಸಿದ ವಕೀಲರು ತಿಳಿಸಿದ್ದಾರೆ. ಈ ವಾದವನ್ನು ಗಮನಿಸಿದ ಸುಪ್ರೀಂಕೋರ್ಟ್ ಮುಂಬೈನ ಮಾಜಿ ಪೊಲೀಸ್ ಅಧಿಕಾರಿಗೆ ಜಾಮೀನು ನೀಡಿದೆ.
ಶರ್ಮಾ ಪರ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಮತ್ತು ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿದರೆ, ಹಿರಿಯ ವಕೀಲ ಆರ್ ಬಸಂತ್ ದೂರುದಾರರ ಪರ ವಾದ ಮಂಡಿಸಿ ಮಾಜಿ ಅಧಿಕಾರಿಯ ಜಾಮೀನು ಅರ್ಜಿಯನ್ನು ವಿರೋಧಿಸಿದರು. ಮಾರ್ಚ್ 19 ರಂದು ಬಾಂಬೆ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಪ್ರದೀಪ್ ಶರ್ಮಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯವು ಅಂಗೀಕರಿಸಿತು. ಇದರ ನಂತರ, ಏಪ್ರಿಲ್ 8 ರಂದು, ಜೀವಾವಧಿ ಶಿಕ್ಷೆಯನ್ನು ಎದುರಿಸಲು ಮುಂದಿನ ಆದೇಶದವರೆಗೆ ಶರ್ಮಾ ಶರಣಾಗುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಏನಿದು ಪ್ರಕರಣ:ನವೆಂಬರ್ 11, 2006 ರಂದು ಪೊಲೀಸ್ ತಂಡವು ರಾಮ್ನಾರಾಯಣ ಗುಪ್ತಾ ಅಲಿಯಾಸ್ ಲಖನ್ ಭಯ್ಯಾ ಮತ್ತು ಅವನ ಸ್ನೇಹಿತ ಅನಿಲ್ ಭೇದಾ ಅವರನ್ನು ನವಿ ಮುಂಬೈನ ವಾಶಿ ಪ್ರದೇಶದಿಂದ ಬಂಧಿಸಿತು. ಅದೇ ದಿನ, ಪಶ್ಚಿಮ ಮುಂಬೈನ ವರ್ಸೋವಾ ಬಳಿ ನಕಲಿ ಎನ್‌ಕೌಂಟರ್‌ನಲ್ಲಿ ರಾಮ್ನಾರಾಯಣ ಗುಪ್ತಾ ಕೊಲ್ಲಲ್ಪಟ್ಟರು. ಇದಾದ ಬಳಿಕ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. 2013ರಲ್ಲಿ ಸೆಷನ್ಸ್ ನ್ಯಾಯಾಲಯ 21 ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಸಂದರ್ಭದಲ್ಲಿ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಶರ್ಮಾ ಅವರನ್ನು ಖುಲಾಸೆಗೊಳಿಸಲಾಯಿತು. ಇದಾದ ಬಳಿಕ ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಓದಿ:ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: ಬಿಜೆಪಿ ಮಾಜಿ ಶಾಸಕನ ಆಪ್ತ ಸಹಿತ ಇಬ್ಬರು ಎಸ್ಐಟಿ ವಶಕ್ಕೆ - Prajwal Revanna Sex Scandal