ಕರ್ನಾಟಕ

karnataka

ETV Bharat / bharat

ಚುನಾವಣಾ ಬಾಂಡ್‌: ಸಮಯಾವಕಾಶ ಕೋರಿದ್ದ ಎಸ್‌ಬಿಐ ಅರ್ಜಿ ವಜಾ, ನಾಳೆಯೊಳಗೆ ಮಾಹಿತಿ ನೀಡುವಂತೆ ಸುಪ್ರೀಂ ಆದೇಶ​ - Supreme Court

ಚುನಾವಣಾ ಬಾಂಡ್‌ಗಳ ವಿವರ ಬಹಿರಂಗಪಡಿಸಲು ಜೂನ್ 30 ರವರೆಗೆ ಸಮಯವನ್ನು ವಿಸ್ತರಿಸುವಂತೆ ಕೋರಿ ಎಸ್‌ಬಿಐ ಮಾಡಿದ ಮನವಿಯನ್ನು ಸುಪ್ರೀಂ ಕೊರ್ಟ್​ ವಜಾಗೊಳಿಸಿದೆ. ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಯಾವುದೇ ಹೆಚ್ಚುವರಿ ಸಮಯವನ್ನು ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಎಸ್‌ಬಿಐಗೆ ತಿಳಿಸಿದೆ.

Supreme Court SBI  Electoral Bonds Supreme Court dismissed SBI's plea
ಚುನಾವಣಾ ಬಾಂಡ್‌ಗಳ ವಿವರ ಬಹಿರಂಗಪಡಿಸುವ ಕುರಿತು ಪ್ರಕರಣ: ಎಸ್‌ಬಿಐ ಮನವಿ ವಜಾಗೊಳಿಸಿದ ಸುಪ್ರೀಂ ಕೊರ್ಟ್​

By ETV Bharat Karnataka Team

Published : Mar 11, 2024, 12:17 PM IST

Updated : Mar 11, 2024, 1:02 PM IST

ನವದೆಹಲಿ: ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ಸಮಯ ವಿಸ್ತರಿಸುವಂತೆ ಕೋರಿ ಎಸ್‌ಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೊರ್ಟ್​ ವಜಾಗೊಳಿಸಿದೆ. ನಾಳೆಯೊಳಗೆ ಎಲ್ಲಾ ದಾನಿಗಳ ವಿವರಗಳನ್ನು ಬಹಿರಂಗಪಡಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ(SBI) ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಜೊತೆಗೆ ಮಾರ್ಚ್ 15ರ ಸಂಜೆ 5 ಗಂಟೆಯೊಳಗೆ ಚುನಾವಣಾ ಬಾಂಡ್​ಗಳ ಮಾಹಿತಿಯನ್ನು ಸಂಗ್ರಹಿಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಭಾರತ ಚುನಾವಣಾ ಆಯೋಗಕ್ಕೆ ಸುಪ್ರೀಂ ನಿರ್ದೇಶಿಸಿದೆ.

ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ಗಡುವು ವಿಸ್ತರಿಸಲು ಎಸ್​ಬಿಐ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ಇಂದು ವಿಚಾರಣೆ ನಡೆಸಿತು. ಚುನಾವಣಾ ಬಾಂಡ್‌ಗಳ ವಿವರ ಸಲ್ಲಿಸಲು ಸಮಯಾವಕಾಶ ಕೋರಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕಳೆದ 26 ದಿನಗಳಿಂದ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದೆ.

ಸುಪ್ರೀಂ ಕೋರ್ಟ್​ ಹೇಳಿದ್ದು:''ಕಳೆದ ತಿಂಗಳು ನೀಡಿದ್ದ ತೀರ್ಪಿನ ಪ್ರಕಾರ ಚುನಾವಣಾ ಬಾಂಡ್​ ದೇಣಿಗೆ ವಿವರಗಳನ್ನು ಬಹಿರಂಗಪಡಿಸುವಂತೆ ಆದೇಶಿಸಿದ್ದೇವು. ನೀವು ಈ ರೀತಿ ಹೆಚ್ಚುವರಿ ಸಮಯ ಕೇಳಿಕೊಂಡು ನಮ್ಮ ಬಳಿ ಬಂದಿರುವುದು ತುಂಬಾ ಗಂಭೀರವಾಗಿದೆ. ನಮ್ಮ ತೀರ್ಪು ಸ್ಪಷ್ಟವಾಗಿದೆ. ಕಳೆದ 26 ದಿನಗಳಲ್ಲಿ ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ನಿಮ್ಮ ಅರ್ಜಿಯಲ್ಲಿ ಅಂತಹ ಯಾವುದೇ ಅಂಶಗಳಿಲ್ಲ'' ಎಂದು ನ್ಯಾಯ ಪೀಠ ಪ್ರಶ್ನಿಸಿತು. ಕೂಡಲೇ ಚುನಾವಣಾ ಆಯೋಗಕ್ಕೆ ವಿವರ ನೀಡಬೇಕು. ಎಸ್‌ಬಿಐ ಮೊಹರು ಮಾಡಿದ ಕವರ್​​ನಲ್ಲಿ ವಿವರಗಳನ್ನು ಚುನಾವಣಾ ಆಯೋಗಕ್ಕೆ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಜೆ. ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಎಸ್‌ಬಿಐಗೆ ಸ್ಪಷ್ಟವಾಗಿ ತಿಳಿಸಿದೆ.

ಇದನ್ನೂ ಓದಿ:ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯಿಂದ ಮಾರ್ಚ್​ 15ರಂದು ಚುನಾವಣಾ ಆಯುಕ್ತರ ನೇಮಕ

ಕಳೆದ ತಿಂಗಳು ಫೆಬ್ರವರಿ 15ರಂದು ರಾಜಕೀಯ ಪಕ್ಷಗಳ ರಹಸ್ಯ ನಿಧಿಯನ್ನು ಶಕ್ತಗೊಳಿಸುವ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಜೊತೆಗೆ ಪಕ್ಷಗಳು ಪಡೆದಿರುವ ಹಣದ ವಿವರ ಹಾಗೂ ನೀಡಿರುವ ದಾನಿಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಈ ತಿಂಗಳ ಮಾರ್ಚ್​ 6ರೊಳಗೆ ನೀಡುವಂತೆ ಎಸ್​ಬಿಐಗೆ ಪೀಠ ಆದೇಶಿಸಿತ್ತು. ಈ ತಿಂಗಳ 12ರೊಳಗೆ ಮಾಹಿತಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಆದ್ರೆ ವಿವರ ಸಲ್ಲಿಸಲು ಹೆಚ್ಚಿನ ಸಮಯಾವಕಾಶ ನೀಡಬೇಕೆಂದು ಕೋರಿ ಎಸ್‌ಬಿಐ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಇದೀಗ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.

Last Updated : Mar 11, 2024, 1:02 PM IST

ABOUT THE AUTHOR

...view details