ನವದೆಹಲಿ: ಅಂಬಾಲಾ ಬಳಿಯ ಶಂಭು ಗಡಿಯಲ್ಲಿನ ಹೆದ್ದಾರಿ ಬಂದ್ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಬ್ಯಾರಿಕೇಡ್ಗಳನ್ನು ತೆಗೆದು ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವಂತೆ ಆದೇಶಿಸಿದೆ. ಪ್ರತಿಭಟನಾ ನಿರತ ರೈತರು ಸಹ ದೇಶದ ನಾಗರಿಕರಾಗಿದ್ದು, ಹೆದ್ದಾರಿಯಲ್ಲಿ ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸಬೇಕೇ ಹೊರತು ರಸ್ತೆ ಬಂದ್ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
"ರಾಜ್ಯ ಸರ್ಕಾರವೇ ಹೆದ್ದಾರಿಯನ್ನು ನಿರ್ಬಂಧಿಸುವುದು ಹೇಗೆ ಸಾಧ್ಯ? ಸಂಚಾರ ನಿಯಂತ್ರಿಸುವುದು ಅದರ ಕರ್ತವ್ಯವಾಗಿದೆ. ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಿ ಹಾಗೂ ಸಂಚಾರವನ್ನು ನಿಯಂತ್ರಿಸಿ" ಎಂದು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೂ ಒಳಗೊಂಡ ನ್ಯಾಯಪೀಠ ಸೂಚಿಸಿತು. ಹೆದ್ದಾರಿ ಬಂದ್ ಆಗಿದ್ದರಿಂದ ಜನರಿಗೆ ಪ್ರಯಾಣಿಸಲು ತೊಂದರೆಯಾಗುತ್ತಿರುವುದನ್ನು ಕೋರ್ಟ್ ಈ ಸಂದರ್ಭದಲ್ಲಿ ಪ್ರಸ್ತಾಪಿಸಿತು.
ಏಳು ದಿನಗಳಲ್ಲಿ ಹೆದ್ದಾರಿಯನ್ನು ತೆರೆಯುವಂತೆ ನಿರ್ದೇಶಿಸಿ ಜುಲೈ 10 ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೊರಡಿಸಿದ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಹರಿಯಾಣ ಸರ್ಕಾರವನ್ನು ಪ್ರತಿನಿಧಿಸುವ ವಕೀಲರು ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ನ್ಯಾಯಪೀಠದ ಮುಂದೆ ವಾದಿಸಿದರು.
"ನೀವು ಹೈಕೋರ್ಟ್ ಆದೇಶವನ್ನು ಏಕೆ ಪ್ರಶ್ನಿಸಲು ಬಯಸುತ್ತೀರಿ? ರೈತರು ಕೂಡ ಈ ದೇಶದ ಪ್ರಜೆಗಳು" ಎಂದು ಹೇಳಿದ ಸುಪ್ರೀಂ ಕೋರ್ಟ್, ರೈತರಿಗೆ ಆಹಾರ ಮತ್ತು ಉತ್ತಮ ವೈದ್ಯಕೀಯ ಸೌಲಭ್ಯ ನೀಡುವಂತೆ ರಾಜ್ಯದ ವಕೀಲರಿಗೆ ತಿಳಿಸಿತು. "ರೈತರು ಬರುತ್ತಾರೆ, ಘೋಷಣೆಗಳನ್ನು ಕೂಗುತ್ತಾರೆ ಮತ್ತು ಹಿಂತಿರುಗುತ್ತಾರೆ. ನೀವು ಬಹುಶಃ ರಸ್ತೆಯ ಮೂಲಕ ಪ್ರಯಾಣಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ನ್ಯಾಯಪೀಠ ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು ತಾವು ರಸ್ತೆಯ ಮೂಲಕವೇ ಪ್ರಯಾಣಿಸುವುದಾಗಿ ತಿಳಿಸಿದರು.