ಹೈದರಾಬಾದ್: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಭಾರತದ ವೈವಿಧ್ಯತೆ ಹೊಗಳುವ ಭರದಲ್ಲಿ 'ಪೂರ್ವ ಭಾರತೀಯರು ಚೀನಿಯರಂತೆ, ದಕ್ಷಿಣ ಜನತೆ ಆಫ್ರಿಕನ್ನರಂತೆ ಕಾಣುತ್ತಾರೆ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರೂ ಆದ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ. ಈ ಹೇಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಚುನಾವಣೆಯ ಹೊತ್ತಲ್ಲಿ ಸ್ಯಾಮ್ ಪಿತ್ರೋಡಾ ಮಾಡಿರುವ ಎರಡನೇ ಎಡವಟ್ಟಾಗಿದೆ. ಕೆಲ ದಿನಗಳ ಹಿಂದೆ ಸಂಪತ್ತಿನ ಮರು ಹಂಚಿಕೆಯ ಬಗ್ಗೆ ಅಮೆರಿಕದಲ್ಲಿ ಈಗಾಗಲೇ ಜಾರಿಯಲ್ಲಿರುವ ಪಿತ್ರಾರ್ಜಿತ ತೆರಿಗೆ ಕಾನೂನಿನ ಬಗ್ಗೆ ಪಿತ್ರೋಡಾ ಹೇಳಿಕೆ ನೀಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ 'ದಿ ಸ್ಟೇಟ್ಸ್‌ಮನ್' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ಭಾರತದ ವೈವಿಧ್ಯತೆಗೆ ಒತ್ತು ಕೊಡುವ ಪ್ರಯತ್ನದಲ್ಲಿ ವಿವಾದ ಸೃಷ್ಟಿಸಿದ್ದಾರೆ.
ಪಿತ್ರೋಡಾ ಹೇಳಿದ್ದೇನು?: ವಿಶ್ವದಲ್ಲಿ ''ಭಾರತವು ಪ್ರಜಾಪ್ರಭುತ್ವದ ಅದ್ಭುತವಾದ ಉದಾಹರಣೆ. ನಾವು 75 ವರ್ಷಗಳಿಂದ ಜನರು ಒಟ್ಟಿಗೆ ವಾಸಿಸುವ ಅತ್ಯಂತ ಸಂತೋಷದ ವಾತಾವರಣದಲ್ಲಿ ಜೀವಿಸುತ್ತಿದ್ದೇವೆ. ಅಲ್ಲಿ, ಇಲ್ಲಿ ಕೆಲವು ಗಲಾಟೆಗಳನ್ನು ಹೊರತು ಪಡಿಸಿದರೆ, ನಾವು ಭಾರತದಂತಹ ವೈವಿಧ್ಯಮಯ ದೇಶವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಬಹುದು. ಪೂರ್ವ ಭಾರತದ ಜನರು ಚೀನಿಯರಂತೆ ಕಾಣುತ್ತಾರೆ. ದಕ್ಷಿಣ ಭಾರತದ ಜನತೆ ಆಫ್ರಿಕನ್ನರಂತೆ ಕಾಣುತ್ತಾರೆ. ಪಶ್ಚಿಮ ಭಾರತದಲ್ಲಿರುವ ಜನರು ಅರಬ್ಬರಂತೆ ಕಾಣುತ್ತಾರೆ. ಉತ್ತರ ಭಾರತದಲ್ಲಿರುವ ಜನರು ಬಹುಶಃ ಬಿಳಿಯರಂತೆ ಕಾಣುತ್ತಾರೆ. ಇದು ನಾನು ನಂಬುವ ಭಾರತವಾಗಿದೆ. ಅಲ್ಲಿ ಪ್ರತಿಯೊಬ್ಬರಿಗೂ ಸ್ಥಳವಿದೆ ಮತ್ತು ಪ್ರತಿಯೊಬ್ಬರೂ ಸ್ವಲ್ಪಮಟ್ಟಿಗೆ ರಾಜಿ ಮಾಡಿಕೊಳ್ಳುತ್ತಾರೆ'' ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.