ನವದೆಹಲಿ :ಇಲ್ಲಿನ ಅಪೊಲೊ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ನರರೋಗ ತಜ್ಞ ಡಾ. ವಿನಿತ್ ಸೂರಿ ಅವರು ತಿಳಿಸಿದ್ದಾರೆ. ಸದ್ಗುರು ತಲೆಬುರುಡೆಯಲ್ಲಿ ಆಗಿರುವ ರಕ್ತಸ್ರಾವ ತೆಗೆದುಹಾಕಲು ಮಾರ್ಚ್ 17 ರಂದು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
"ಕೆಲವು ದಿನಗಳ ಹಿಂದೆ ಸದ್ಗುರುಗಳ ಮೆದುಳಿನಲ್ಲಿ ಜೀವಕ್ಕೆ ಅಪಾಯಕಾರಿಯಾದ ರೀತಿ ರಕ್ತಸ್ರಾವವಾಗಿತ್ತು. ಹೀಗಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಸದ್ಗುರುಗಳು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡವು ಅವರ ಸ್ಥಿತಿಯು ನಿರೀಕ್ಷೆಗೂ ಮೀರಿ ಸುಧಾರಿಸುತ್ತಿದೆ " ಎಂದು ಡಾ. ಸೂರಿ ಹೇಳಿದ್ದಾರೆ.
66 ವರ್ಷದ ಅಧ್ಯಾತ್ಮಿಕ ಗುರು ಇಶಾ ಫೌಂಡೇಶನ್‌ನ ಸಂಸ್ಥಾಪಕರಾಗಿದ್ದಾರೆ ಮತ್ತು ಪರಿಸರ ಸಂರಕ್ಷಣೆಗಾಗಿ 'ಮಣ್ಣು ಉಳಿಸಿ' ಮತ್ತು 'ನದಿಗಳಿಗಾಗಿ ರ್‍ಯಾಲಿ 'ಯಂತಹ ಅಭಿಯಾನಗಳ ಮೂಲಕ ದೇಶಾದ್ಯಂತ ಖ್ಯಾತಿ ಗಳಿಸಿದ್ದಾರೆ. ಕಳೆದ ನಾಲ್ಕು ವಾರಗಳಿಂದ ಸದ್ಗುರುಗಳು ತೀವ್ರ ತಲೆನೋವಿನಿಂದ ಬಳಲುತ್ತಿದ್ದರು. ನೋವಿನ ತೀವ್ರತೆಯ ಹೊರತಾಗಿಯೂ, ಅವರು ತಮ್ಮ ದೈನಂದಿನ ಕಾರ್ಯಕ್ರಮಗಳನ್ನು ಮುಂದುವರೆಸಿದ್ದರು ಮತ್ತು ಮಾರ್ಚ್ 8 ರಂದು ಮಹಾ ಶಿವರಾತ್ರಿ ಕಾರ್ಯಕ್ರಮ ಸಹ ನಡೆಸಿದ್ದರು ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾರ್ಚ್ 15ರ ಹೊತ್ತಿಗೆ ಅವರಿಗೆ ತಲೆನೋವು ಉಲ್ಬಣಗೊಂಡಿತ್ತು. ಆಗ ಅವರು ಆಸ್ಪತ್ರೆಯ ಹಿರಿಯ ಸಲಹೆಗಾರ ನರರೋಗ ತಜ್ಞ ಡಾ. ಸೂರಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ತಮಗಾಗಿರುವ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು. ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡ ಡಾ ಸೂರಿ, ತುರ್ತು ಎಂಆರ್ಐ ಸ್ಕ್ಯಾನ್ಗೆ ಒಳಗಾಗುವಂತೆ ಸಲಹೆ ನೀಡಿದ್ದರು.
ವೈದ್ಯರ ಸಲಹೆ ಮೆರೆಗೆ ಸದ್ಗುರುಗಳು ಅದೇ ದಿನ ಮೆದುಳಿನ ಎಂಆರ್ಐ ಸ್ಕ್ಯಾನ್ಗೆ ಒಳಗಾದರು. ಎಂಆರ್ಐ ಸ್ಕ್ಯಾನ್ ನಲ್ಲಿ ಅವರ ತಲೆಬುರುಡೆಯಲ್ಲಿ ಭಾರಿ ರಕ್ತಸ್ರಾವವಾಗಿರುವುದು ಕಂಡು ಬಂದಿತ್ತು. ಹೀಗಾಗಿ ಅವರನ್ನು ತಕ್ಷಣವೇ ಅಪೋಲೋ ಆಸ್ಪತ್ರೆಗೆ ದಾಖಲಿಸಿ, ಶಸ್ತ್ರಚಿಕಿತ್ಸೆ ನೀಡಲಾಗಿದೆ. ಮಾರ್ಚ್ 15 ಮತ್ತು ಮಾರ್ಚ್ 16 ರಂದು ಪ್ರಮುಖ ಸಭೆಗಳು ಮತ್ತು ಕಾರ್ಯಕ್ರಮಗಳಿದ್ದವು. ಈ ವೇಳೆ, ಸದ್ಗುರು ವೈದ್ಯರ ಸಲಹೆ ಮೇರೆಗೆ ಔಷಧ ಪಡೆದು, ನಿಗದಿತ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ್ದರು. ಆ ಬಳಿಕ ಅವರು, ಮಾರ್ಚ್ 17 ರಂದು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಡಾ. ವಿನಿತ್ ಸೂರಿ, ಡಾ. ಪ್ರಣವ್ ಕುಮಾರ್, ಡಾ. ಸುಧೀರ್ ತ್ಯಾಗಿ ಮತ್ತು ಡಾ. ಎಸ್ ಚಟರ್ಜಿ ಅವರನ್ನೊಳಗೊಂಡ ವೈದ್ಯರ ತಂಡವು ಸದ್ಗುರುಗಳ ಚಿಕಿತ್ಸೆಯನ್ನು ನಿರ್ವಹಿಸಿದೆ. ಅವರ ತಲೆಬುರುಡೆಯಲ್ಲಿನ ರಕ್ತಸ್ರಾವವನ್ನು ತೆಗೆಯಲು ಮಾರ್ಚ್ 17 ರಂದು ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ :ಜೀವಂತ ಹಾವನ್ನು ಹಿಡಿದ ಸದ್ಗುರು.. ಅರಣ್ಯ ಸಂರಕ್ಷಣೆ ಕಾಯ್ದೆ ಉಲ್ಲಂಘನೆ ಆರೋಪಕ್ಕೆ ಇಶಾ ಫೌಂಡೇಶನ್ ಸ್ಪಷ್ಟನೆ