ಹೈದರಾಬಾದ್ (ತೆಲಂಗಾಣ):ಲೋಕಸಭೆ ಚುನಾವಣೆ ನಡುವೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಮೀಸಲಾತಿ ಕುರಿತು ಪ್ರತಿಕ್ರಿಯಿಸಿದ್ದಾರೆ. ಕೆಲವು ಗುಂಪುಗಳಿಗೆ ಮೀಸಲಾತಿ ನೀಡುವುದನ್ನು ಸಂಘಪರಿವಾರ ಎಂದಿಗೂ ವಿರೋಧಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹೈದರಾಬಾದ್‌ನ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಿಯವರೆಗೆ ಮೀಸಲಾತಿ ಅಗತ್ಯವಿದೆಯೋ ಅಲ್ಲಿಯವರೆಗೆ ನೀಡಬೇಕು ಎಂದು ಸಂಘ ನಂಬುತ್ತದೆ ಎಂದು ಭಾಗವತ್ ಹೇಳಿದರು. ಮೀಸಲಾತಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರದ ನಂತರ ಭಾಗವತ್ ಈ ಹೇಳಿಕೆ ನೀಡಿದ್ದಾರೆ.
ಮೋಹನ್ ಭಾಗವತ್ ಅವರು ಹೈದರಾಬಾದ್‌ನ ನಾದರ್‌ಗುಲ್‌ನಲ್ಲಿ ವಿದ್ಯಾಭಾರತಿ ವಿಜ್ಞಾನ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಂತರ, ಆರ್‌ಆರ್‌ಎಸ್ ಮೀಸಲಾತಿ ವಿರುದ್ಧ ಎಂಬ ಸುಳ್ಳು ಪ್ರಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಸಂದರ್ಭದಲ್ಲಿ ತಮ್ಮ ಬಗ್ಗೆ ಸುಳ್ಳು ಮಾಹಿತಿಗಳನ್ನು ವೈರಲ್ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎಐ ಬಳಸಿ ಸುಳ್ಳು ವಿಡಿಯೋಗಳನ್ನು ಮಾಡಲಾಗುತ್ತಿದೆ. ಮೀಸಲಾತಿಗೆ ತಾವು ವಿರೋಧಿಗಳಲ್ಲ. ಸಮಾಜದಲ್ಲಿನ ಭಿನ್ನಾಭಿಪ್ರಾಯಗಳು ಕಳೆದೋಗುವವರೆಗೆ ಮೀಸಲಾತಿ ಇರಬೇಕು. ಸಮಾಜದಲ್ಲಿ ವಿವಾದ ಸೃಷ್ಟಿಸಲು ಕೆಲವರು ಯತ್ನಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಬೇಕು ಎಂದು ಹೇಳಿದರು.
"ಆರ್‌ಎಸ್‌ಎಸ್ ಮೀಸಲಾತಿ ವಿರುದ್ಧವಾಗಿದೆ ಎಂದು ಹೇಳುವ ವಿಡಿಯೋ ವೈರಲ್ ಆಗುತ್ತಿದೆ. ಆರ್‌ಎಸ್‌ಎಸ್ ಮೀಸಲಾತಿ ವಿರುದ್ಧ ಅಲ್ಲ. ಮೀಸಲಾತಿ ಅಗತ್ಯ ಇರುವವರೆಗೂ ಮುಂದುವರೆಯಬೇಕು. ಎಐ ಬಳಸಿ ನಕಲಿ ವಿಡಿಯೋಗಳನ್ನು ರಚಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮವನ್ನು ಒಳ್ಳೆಯದಕ್ಕಾಗಿ ಬಳಸಬೇಕು." - ಮೋಹನ್ ಭಾಗವತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ.
ಸಂವಿಧಾನವನ್ನು ಆಮೂಲಾಗ್ರವಾಗಿ ಬದಲಾಯಿಸುವ ಮೂಲಕ ದೇಶವನ್ನು ಮೀಸಲಾತಿ ಮುಕ್ತಗೊಳಿಸುವುದು ಬಿಜೆಪಿಯ ಗುರಿಯಾಗಿದೆ. ಇದರೊಂದಿಗೆ ಆರ್‌ಎಸ್‌ಎಸ್ ಸ್ಥಾಪನೆಯಾಗಿ 2025ಕ್ಕೆ 100 ವರ್ಷವಾಗಲಿದ್ದು, ಆ ವೇಳೆಗೆ ಸಂವಿಧಾನವನ್ನು ಬದಲಿಸುವುದು ಮತ್ತು ಮೀಸಲಾತಿಯನ್ನು ರದ್ದುಗೊಳಿಸುವುದು ಆರ್‌ಎಸ್‌ಎಸ್ ಗುರಿಯಾಗಿದೆ. ಸಂವಿಧಾನದ ಮೂಲಭೂತ ತತ್ವಗಳ ಮೇಲೆ ದಾಳಿ ನಡೆಸುವ ಸಂಚು ನಡೆಯುತ್ತಿದೆ ಎಂದು ಇತ್ತೀಚೆಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆರೋಪಿಸಿದ್ದರು.
ಓದಿ:ಕೇಂದ್ರ ಸರ್ಕಾರದ ಜೊತೆ ಸಂಘರ್ಷ ಒಳ್ಳೆಯ ಬೆಳವಣಿಗೆ ಅಲ್ಲ: ಹೆಚ್.ಡಿ. ಕುಮಾರಸ್ವಾಮಿ - HD Kumaraswamy Press Meet