ಕಿಶನ್ ಗಂಜ್ (ಬಿಹಾರ): ಆರ್ಎಸ್ಎಸ್ ಮತ್ತು ಬಿಜೆಪಿಯ ಸಿದ್ಧಾಂತಗಳು ದೇಶದಲ್ಲಿ ಹಿಂಸೆ ಮತ್ತು ದ್ವೇಷ ಹರಡುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ತಮ್ಮ 'ಭಾರತ್ ಜೋಡೋ ನ್ಯಾಯ್ ಯಾತ್ರೆ'ಯ ಭಾಗವಾಗಿ ಇಲ್ಲಿ ಸಾರ್ವಜನಿಕ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಆಡಳಿತದಲ್ಲಿ ವಿವಿಧ ಧರ್ಮ ಮತ್ತು ಜಾತಿಗಳಿಗೆ ಸೇರಿದ ಜನ ಹೊಡೆದಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
"ಆರ್ಎಸ್ಎಸ್ ಮತ್ತು ಬಿಜೆಪಿಯ ಸಿದ್ಧಾಂತಗಳು ದೇಶದಲ್ಲಿ ಹಿಂಸಾಚಾರ ಮತ್ತು ದ್ವೇಷವನ್ನು ಹರಡುತ್ತಿವೆ. ನಾವು 'ನಫ್ರತ್ ಕಾ ಬಜಾರ್' ನಲ್ಲಿ 'ಮೊಹಬ್ಬತ್ ಕಿ ದುಕಾನ್' ತೆರೆಯಲು ಬಯಸುತ್ತೇವೆ" (ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ಬಯಸುತ್ತೇವೆ) ಎಂದು ರಾಹುಲ್ ನುಡಿದರು. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ನ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಇಂದು ಬೆಳಗ್ಗೆ ಕಿಶನ್ಗಂಜ್ ಮೂಲಕ ಬಿಹಾರ ಪ್ರವೇಶಿಸಿತು.
ಬಿಹಾರದಲ್ಲಿ ರಾಹುಲ್ ಗಾಂಧಿ ಕಾರ್ಯಕ್ರಮಗಳ ವಿವರ: ರಾಹುಲ್ ಗಾಂಧಿ ಮಂಗಳವಾರ ಕಿಶನ್ಗಂಜ್ನಲ್ಲಿ ಸಾರ್ವಜನಿಕ ಸಭೆ ಮತ್ತು ಪಕ್ಕದ ಜಿಲ್ಲೆ ಪೂರ್ಣಿಯಾದಲ್ಲಿ ದೊಡ್ಡ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಬುಧವಾರ ಕಟಿಹಾರ್ನಲ್ಲಿ ಮತ್ತೊಂದು ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ಗುರುವಾರ ಅರಾರಿಯಾ ಜಿಲ್ಲೆಯ ಮೂಲಕ ಪಶ್ಚಿಮ ಬಂಗಾಳಕ್ಕೆ ತೆರಳಲಿದ್ದು, ಕೆಲ ದಿನಗಳ ನಂತರ ಜಾರ್ಖಂಡ್ ಮೂಲಕ ಮತ್ತೆ ಬಿಹಾರಕ್ಕೆ ಮರಳಲಿದ್ದಾರೆ.