ವೇಮುಲವಾಡ (ತೆಲಂಗಾಣ):ತೆಲಂಗಾಣದಲ್ಲಿ ಅಭಿವೃದ್ಧಿ ನಿಂತು ಹೋಗಿದೆ. ರಾಜ್ಯಾಡಳಿತ ಕ್ಷೀಣಿಸಿದೆ. ಜನರು ಸಂಕಷ್ಟದಲ್ಲಿದ್ದಾರೆ. ಆರ್‌ಆರ್‌ಆರ್ ಸಿನಿಮಾ ಗಳಿಸಿದ ಹಣಕ್ಕಿಂತಲೂ ಆರ್‌ಆರ್ (ರೇವಂತ್ ರೆಡ್ಡಿ) ತೆರಿಗೆ ಜನರಿಗೆ ಹೊರೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ಮಾರ್ಚ್ 13 ರಂದು ನಾಲ್ಕನೇ ಹಂತದ ಮತದಾನ ಹಿನ್ನೆಲೆ ತೆಲಂಗಾಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಧಾನಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಆರ್‌ಆರ್ ತೆರಿಗೆ ರಾಷ್ಟ್ರವ್ಯಾಪಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ತೆಲುಗಿನಲ್ಲಿ ಭರ್ಜರಿ ಹಿಟ್ ಕಂಡ ಆರ್‌ಆರ್‌ಆರ್ ಸಿನಿಮಾ ಗಳಿಸಿದ ಹಣಕ್ಕಿಂತ ದುಪ್ಪಟ್ಟು, ಆರ್‌ಆರ್ ಟ್ಯಾಕ್ಸ್ ವಸೂಲಿಯಾಗಿದೆ ಎಂಬ ಆರೋಪವಿದೆ ಎಂದು ಪ್ರಧಾನಿ ಹೇಳಿದರು.
ಮೂರನೇ ಹಂತದಲ್ಲೇ ಸೋತ ಕಾಂಗ್ರೆಸ್:ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಮುಗಿದಿದೆ. ಜನರು ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ. ಇದರಿಂದ ಕಾಂಗ್ರೆಸ್ ಮೂರು ಹಂತಗಳು ಮುಗಿಯುವ ಹೊತ್ತಿಗೆ ಸೋಲು ಕಂಡಿದೆ. INDI ಮೈತ್ರಿಕೂಟ ಜನರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿದೆ ಎಂದರು.
ಇನ್ನುಳಿದ 4 ಹಂತಗಳ ಮತದಾನದಲ್ಲಿ ಜನರು ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತ ಹಾಕಲಿದ್ದಾರೆ. ಕರೀಂನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಂಡಿ ಸಂಜಯ್ ಅವರ ಗೆಲುವು ಈಗಾಗಲೇ ನಿರ್ಧಾರವಾಗಿದೆ. ಇಲ್ಲಿ ಪರಿಚಿತವಲ್ಲದ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ ಎಂದು ಲೇವಡಿ ಮಾಡಿದರು.