ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿದ್ದಾರೆ. ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಜೂನ್ 2ರಂದು ಜೈಲಿಗೆ ಶರಣಾಗಿದ್ದರು. ಈ ಹಿಂದೆ ಸುಪ್ರೀಂ ಕೋರ್ಟ್ 21 ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಆರೋಗ್ಯದ ಕಾರಣ ನೀಡಿ ಮಧ್ಯಂತರ ಜಾಮೀನು ಹೆಚ್ಚಿಸುವಂತೆ ಕೇಜ್ರಿವಾಲ್ ಒತ್ತಾಯಿಸಿದ್ದರು. ಆದರೆ ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ಇದೀಗ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ವೈದ್ಯಕೀಯ ತಪಾಸಣೆಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಮಾತ್ರ ಮಾಡಲಾಗುತ್ತದೆ. ಆದರೆ ಕೇಜ್ರಿವಾಲ್ ಅವರು ತಮ್ಮ ಪತ್ನಿ ಸುನೀತಾ ಕೇಜ್ರಿವಾಲ್ ಅವರನ್ನು ವೈದ್ಯಕೀಯ ತಪಾಸಣಾ ಮಂಡಳಿಗೆ ಸೇರಿಸಲು ಬಯಸಿದ್ದಾರೆ. ಇದಕ್ಕಾಗಿ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜೂನ್ 15ರಂದು ಪ್ರಕರಣದ ವಿಚಾರಣೆ ನಡೆಯಲಿದೆ.
ಅರವಿಂದ್ ಕೇಜ್ರಿವಾಲ್ ತಮ್ಮ ಪತ್ನಿ ಸುನೀತಾ ಕೇಜ್ರಿವಾಲ್ ಅವರ ವೈದ್ಯಕೀಯ ತಪಾಸಣೆಗೆ ಹಾಜರಾಗಲು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅನುಮತಿ ಕೋರಿದ್ದಾರೆ. ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶರು ಶನಿವಾರಕ್ಕೆ ನಿಗದಿಪಡಿಸಿದ್ದಾರೆ. ಈ ಅರ್ಜಿಯಲ್ಲಿ ಕೇಜ್ರಿವಾಲ್ ಅವರ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆ ನಿರ್ಧರಿಸಲು ರಚಿಸಲಾದ ವೈದ್ಯಕೀಯ ಮಂಡಳಿಯ ಪ್ರಕ್ರಿಯೆಯಲ್ಲಿ ಸುನೀತಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲು ಅವಕಾಶ ನೀಡುವಂತೆ ಸೂಚನೆ ನೀಡುಲು ಮನವಿ ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ನೀಡುವಂತೆ ಸಂಬಂಧಪಟ್ಟ ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದ್ದಾರೆ. ನ್ಯಾಯಾಧೀಶರು, 'ಆರೋಪಿ ಪರವಾಗಿ ಪತ್ನಿಯನ್ನು ವೈದ್ಯಕೀಯ ಮಂಡಳಿಗೆ ಸೇರಿಸುವಂತೆ ನಿರ್ದೇಶನ ನೀಡುವಂತೆ ಅರ್ಜಿ ಸಲ್ಲಿಸಲಾಗಿದೆ. ಯಾವುದೇ ರೀತಿಯ ಆದೇಶವನ್ನು ರವಾನಿಸುವ ಮೊದಲು, ಸಂಬಂಧಪಟ್ಟ ಜೈಲು ಅಧೀಕ್ಷಕರಿಂದ ಉತ್ತರಗಳನ್ನು ಪಡೆಯುವುದು ಸೂಕ್ತವೆಂದು ನಾನು ಭಾವಿಸುತ್ತೇನೆ. ನಾಳೆ (ಶನಿವಾರ) ಅರ್ಜಿಯ ವಿಚಾರಣೆ ನಡೆಯಲಿದೆ’ ಎಂದು ತಿಳಿಸಿ ವಿಚಾರಣೆ ಮುಂದೂಡಿತು.