ನವದೆಹಲಿ: ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ'ಗೆ ಮತ್ತೊಂದು ಹೊಡೆತ ಬಿದ್ದಿದೆ. ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್ ಚೌಧರಿ ಅವರು ಶನಿವಾರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸೇರ್ಪಡೆಗೊಂಡಿದ್ದಾರೆ. ಜಯಂತ್ ಚೌಧರಿ ಅವರೊಂದಿಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ಸಭೆ ನಡೆಸಿದರು. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಇದೇ ವೇಳೆ ಚೌಧರಿ ವಿಶ್ವಾಸ ವ್ಯಕ್ತಪಡಿಸಿದರು.
''ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಬಡವರ ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ಸಾಕ್ಷಿಯಾಗುತ್ತಿದೆ. ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಎನ್‌ಡಿಎ ಸೇರಲು ನಿರ್ಧರಿಸಿದೆ. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ಮತ್ತು ಈ ಬಾರಿ 400 ಸೀಟುಗಳನ್ನು ದಾಟುವ ಗುರಿ ಈಡೇರಿಸಲು ಎನ್‌ಡಿಎ ಸಿದ್ಧವಾಗಿದೆ" ಎಂದು ಸಾಮಾಜಿಕ ಜಾಲತಾಣ 'ಎಕ್ಸ್' ಪೋಸ್ಟ್‌ನಲ್ಲಿ ಚೌಧರಿ ಬರೆದುಕೊಂಡಿದ್ದಾರೆ.
ಚೌಧರಿಯನ್ನು ಎನ್‌ಡಿಎಗೆ ಸ್ವಾಗತಿಸಿದ ನಡ್ಡಾ:ಚೌಧರಿ ಅವರನ್ನು ಎನ್‌ಡಿಎಗೆ ಸ್ವಾಗತಿಸಿರುವುದಾಗಿ ಜೆ.ಪಿ.ನಡ್ಡಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. "ಗೌರವಾನ್ವಿತ ಗೃಹ ಸಚಿವ ಅಮಿತ್‌ಶಾಜಿ ಸಮ್ಮುಖದಲ್ಲಿ, ಆರ್‌ಎಲ್‌ಡಿ ಪಕ್ಷದ ಅಧ್ಯಕ್ಷ ಜಯಂತ್ ಚೌಧರಿ ಅವರೊಂದಿಗೆ ಸಭೆ ನಡೆಯಿತು. ಎನ್‌ಡಿಎ ಕುಟುಂಬಕ್ಕೆ ಸೇರುವ ಅವರ ನಿರ್ಧಾರವನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ'' ಎಂದು ತಿಳಿಸಿದ್ದಾರೆ.
''ನನ್ನ ಪಕ್ಷದ ಎಲ್ಲಾ ಶಾಸಕರು ಮತ್ತು ಕಾರ್ಯಕರ್ತರೊಂದಿಗೆ ಮಾತನಾಡಿದ ನಂತರ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಇದರ ಹಿಂದೆ ಯಾವುದೇ ದೊಡ್ಡ ಯೋಜನೆ ಇಲ್ಲ. ನಾವು ಇದನ್ನು ಬಹಳ ಹಿಂದೆಯೇ ನಿರ್ಧರಿಸಿದ್ದೆವು. ದೇಶಕ್ಕೆ ಮತ್ತು ನಮ್ಮ ಜನರಿಗೆ ಏನಾದರೂ ಒಳ್ಳೆಯದನ್ನು ಮಾಡಲು ನಾವು ಬಯಸುತ್ತೇವೆ'' ಎಂದು ಚೌಧರಿ ಹೇಳಿದ್ದಾರೆ.