ಕರ್ನಾಟಕ

karnataka

ETV Bharat / bharat

ಸಾಕು ನಾಯಿ ಕೊಂದ ಬೀದಿನಾಯಿಗಳ ಮೇಲೆ ಸೇಡು; 20 ಶ್ವಾನಗಳಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಕಿರಾತಕರು - Revenge On Stray Dogs in Telgangana

ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯಲ್ಲಿ ಸಾಕು ನಾಯಿ ಕೊಂದ ಬೀದಿನಾಯಿಗಳ ಮೇಲಿನ ದ್ವೇಷದಿಂದ ಮೂವರು ಕಿರಾತಕರು 20 ಶ್ವಾನಗಳಿಗೆ ಗುಂಡಿಕ್ಕಿ ಹತ್ಯೆಗೈದ ಘಟನೆ ಬೆಳಕಿಗೆ ಬಂದಿದೆ.

Revenge On Stray Dogs For Killing Pet Dog: Three Held For Shooting 20 Canines To Death In Telangana
ಸಾಕು ನಾಯಿ ಕೊಂದ ಬೀದಿನಾಯಿಗಳ ಮೇಲೆ ಸೇಡು; 20 ಶ್ವಾನಗಳಿಗೆ ಗುಂಡಿಕ್ಕಿ ಹತ್ಯೆಗೈದ ಕಿರಾತಕರು

By ETV Bharat Karnataka Team

Published : Mar 20, 2024, 11:00 PM IST

ಮಹಬೂಬ್‌ನಗರ (ತೆಲಂಗಾಣ): ವ್ಯಕ್ತಿಯೋರ್ವ ತನ್ನ ಸ್ನೇಹಿತರ ಜೊತೆಗೂಡಿ ಏಕಕಾಲಕ್ಕೆ 20 ಬೀದಿ ನಾಯಿಗಳನ್ನು ಗುಂಡಿಕ್ಕಿ ಕೊಂದಿರುವ ಅಮಾನವೀಯ ಘಟನೆ ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯಲ್ಲಿ ನಡೆದಿದೆ. ಒಂದು ತಿಂಗಳ ಹಿಂದೆ ನಡೆದ ಘಟನೆ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ರಂಗಾರೆಡ್ಡಿ ಜಿಲ್ಲೆಯ ಫಾರೂಖ್‌ನಗರ ಮಂಡಲದ ಗೋಡುಪಲ್ಲಿ ಮೂಲದ ಮಂದ ನರಸಿಂಹ ರೆಡ್ಡಿ, ಈತನ ಸ್ನೇಹಿತರಾದ ತಾರಿಕ್ ಅಹ್ಮದ್​ ಮತ್ತು ಮೊಹಮ್ಮದ್ ತಾಹೆರ್ ಎಂಬುವವರೇ ಬಂಧಿತ ಆರೋಪಿಗಳು. 57 ವರ್ಷದ ನರಸಿಂಹ ರೆಡ್ಡಿ, ಹೈದರಾಬಾದ್‌ನ ರೆಡ್‌ ಹಿಲ್ಸ್‌ನಲ್ಲಿ ವಾಸಿಸುತ್ತಿದ್ದಾನೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರ್ಷವರ್ಧನ್ ಹೇಳಿದ್ದಾರೆ.

ಇಲ್ಲಿನ ಅಡ್ಡಾಕುಲ ಮಂಡಲದ ಪೊನ್ನಕಲ್ ಗ್ರಾಮದಲ್ಲಿ ಕಳೆದ ತಿಂಗಳು ಒಂದು ಸಾಕುನಾಯಿಯನ್ನು ಬೀದಿನಾಯಿಗಳು ಕಚ್ಚಿ ಸಾಯಿಸಿದ್ದವು. ಈ ಘಟನೆಯಲ್ಲಿ ಇನ್ನೊಂದು ನಾಯಿ ಸಹ ಗಾಯಗೊಂಡಿತ್ತು. ಈ ದಾಳಿಕೋರ ಬೀದಿ ನಾಯಿಗಳ ಮೇಲೆ ಕೋಪಗೊಂಡ ನರಸಿಂಹ ರೆಡ್ಡಿ ಫೆಬ್ರವರಿ 15ರಂದು ತಮ್ಮ ಸ್ನೇಹಿತರ ಜೊತೆ ಕಾರಿನಲ್ಲಿ ಗ್ರಾಮಕ್ಕೆ ಬಂದಿದ್ದ. ಅಂದು ಬೆಳಗಿನ ಜಾವ 1.30ರ ಸುಮಾರಿಗೆ ತಾರಿಕ್ ಅಹ್ಮದ್ ಎಂಬಾತ ಪರವಾನಗಿ ಪಡೆದ ಬಂದೂಕಿನಿಂದ ಗ್ರಾಮದಲ್ಲಿ ಸಿಕ್ಕ ಎಲ್ಲ ನಾಯಿಗಳನ್ನು ಶೂಟ್ ಮಾಡಲು ಹೋಗಿದ್ದಾನೆ. ಇದರ ಪರಿಣಾಮ 20 ನಾಯಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದವು ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ.

ಈ ಬೀದಿನಾಯಿಗಳ ಹತ್ಯೆ ಕುರಿತು ಪಂಚಾಯಿತಿ ಕಾರ್ಯದರ್ಶಿ ವಿಜಯ ರಾಮರಾಜು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ ಆರೋಪಿಗಳು ಬೆಂಜ್ ಕಾರಿನಲ್ಲಿ ಬಂದಿರುವುದು ಪತ್ತೆಯಾಗಿದೆ. ಅಲ್ಲದೇ, ಪೊನ್ನಕಲ್​ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಂಗಳವಾರ ಒಂದೇ ಕಾರಿನಲ್ಲಿ ಮೂವರು ಸಹ ಬಂದಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರ ತಂಡ ದಾಳಿ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ0.22 ರೈಫಲ್, 6 ಮೊಬೈಲ್​ ಫೋನ್ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹರ್ಷವರ್ಧನ್ ವಿವರಿಸಿದ್ದಾರೆ.

ಇದನ್ನೂ ಓದಿ:ವಿಷಪೂರಿತ ಮದ್ಯ ಸೇವಿಸಿ ನಾಲ್ವರ ಸಾವು; ಇಬ್ಬರು ಅಸ್ವಸ್ಥ

ABOUT THE AUTHOR

...view details