ಭರತಪುರ(ರಾಜಸ್ಥಾನ):ಮರುಭೂಮಿ ರಾಜ್ಯ ರಾಜಸ್ಥಾನದ ಭರತಪುರದಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಉತ್ಖನನದ ವೇಳೆ ತಾಮ್ರ ಯುಗ, ಆರ್ಯ, ಕುಶಾನ, ಮೌರ್ಯ ಹಾಗೂ ಮಹಾಭಾರತ ಕಾಲದ ಕುರುಹುಗಳು ದೊರೆತಿವೆ. ಇಲ್ಲಿನ ಹಲವು ಪ್ರದೇಶಗಳನ್ನು ಶ್ರೀಕೃಷ್ಣನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ.
ಭರತ್‌ಪುರ ಶ್ರೀಮಂತ ಇತಿಹಾಸ ಹಾಗೂ ಅನೇಕ ನಾಗರಿಕತೆಗಳೊಂದಿಗೆ ಸಂಬಂಧ ಹೊಂದಿದೆ. ಇದೀಗ ಪುರಾತತ್ವ ಇಲಾಖೆಯ ಉತ್ಖನನದ ಸಮಯದಲ್ಲಿ ವಿವಿಧ ಪ್ರದೇಶಗಳಲ್ಲಿ ಅನೇಕ ವರ್ಷಗಳ ಹಿಂದಿನ ಅವಶೇಷಗಳು, ಕುರುಹುಗಳು ಕಂಡುಬಂದಿವೆ. ರಾಜ್ಯದ ದೀಗ್ ಜಿಲ್ಲೆಯ ಬಹ್ಜ್ ಗ್ರಾಮದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಿಬ್ಬಂದಿ ಉತ್ಖನನ ಕಾರ್ಯ ನಡೆಸುತ್ತಿದ್ದಾರೆ.
ಇದುವರೆಗಿನ ಉತ್ಖನನಗಳಲ್ಲಿ ಕುಶಾನರ ಕಾಲ, ಶುಂಗರ ಕಾಲ, ಮೌರ್ಯರ ಕಾಲ, ಮಹಾಜನಪದ ಕಾಲ ಮತ್ತು ಮಹಾಭಾರತ ಕಾಲದ ಅವಶೇಷಗಳು ಹಾಗೂ ನಿಕ್ಷೇಪಗಳು ದೊರೆತಿವೆ. ಇದಲ್ಲದೆ ಮೂಳೆಗಳಿಂದ ತಯಾರಿಸಿದ ಸೂಜಿಯಾಕಾರದ ಉಪಕರಣಗಳು ಸಹ ಕಂಡುಬಂದಿವೆ. ಇಂತಹ ಕುರುಹುಗಳು ಇದುವರೆಗೂ ಭಾರತದ ಬೇರೆಲ್ಲೂ ಕಂಡುಬಂದಿಲ್ಲ ಎಂಬುದು ಅಚ್ಚರಿ.
ಯಾವ ಪ್ರದೇಶದಲ್ಲಿ, ಯಾವ ಕುರುಹುಗಳು ಪತ್ತೆ?: ನೌನಾ ಗ್ರಾಮದಲ್ಲಿ ತಾಮ್ರ ಯುಗ ಮತ್ತು ಆರ್ಯರ ಕಾಲದ ಕುರುಹುಗಳು ದೊರೆತಿವೆ. ಭರತ್‌ಪುರ ಕೇಂದ್ರ ಸ್ಥಾನದಿಂದ 6 ಕಿ.ಮೀ ದೂರದಲ್ಲಿ ಈ ನೌನಾ ಗ್ರಾಮವಿದೆ. ಇಲ್ಲಿ ಅನೇಕ ನಾಗರಿಕತೆಗಳ ಅವಶೇಷಗಳು ಕಂಡುಬಂದಿವೆ. 1963ರಲ್ಲೇ ನೌನಾ ಗ್ರಾಮದಲ್ಲಿ ಪುರಾತತ್ವ ಇಲಾಖೆಯು ಉತ್ಖನನ ಕಾರ್ಯ ನಡೆಸಿತ್ತು. ಆ ಸಮಯದಲ್ಲಿ ಮೌರ್ಯ, ಸುಂಗ ಮತ್ತು ಕುಶಾನ ಕಾಲದ ಶಿಲ್ಪಗಳು ಇಲ್ಲಿ ಕಂಡುಬಂದಿವೆ. ಕ್ರಿ.ಪೂ. 12ನೇ ಶತಮಾನದಲ್ಲಿ ಭಾರತದಲ್ಲಿ ಕಬ್ಬಿಣವನ್ನು ಬಳಸಲಾಗುತ್ತಿತ್ತು ಎಂಬುದು ಇಲ್ಲಿನ ಉತ್ಖನನಗಳಿಂದ ತಿಳಿದುಬಂದಿದೆ. ತಾಮ್ರ ಯುಗ, ಆರ್ಯ ಮತ್ತು ಮಹಾಭಾರತ ಕಾಲದ ನಾಗರೀಕತೆಯ ಅವಶೇಷಗಳೂ ಇಲ್ಲಿ ದೊರೆತಿವೆ ಎಂದು ಇತಿಹಾಸಕಾರ ರಾಮವೀರ್ ಸಿಂಗ್ ವರ್ಮಾ ಹೇಳಿದ್ದಾರೆ.