ನವದೆಹಲಿ:ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ಅವರು, ಸೋಮವಾರ ಬೆಳಗ್ಗೆ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದರು. ಸುಮಾರು 9.3 ಕೋಟಿ ರೈತರಿಗೆ ಅನುಕೂಲವಾಗಲಿರುವ ಸುಮಾರು 20,000 ಕೋಟಿ ರೂಪಾಯಿ ಮೊತ್ತದ 'ಪಿಎಂ ಕಿಸಾನ್ ನಿಧಿ'ಯ 17 ನೇ ಕಂತಿನ ಬಿಡುಗಡೆಗೆ ಅನುಮೋದನೆ ನೀಡಿದರು.
ಹಣ ಬಿಡುಗಡೆಗೆ ಸಹಿ ಹಾಕಿದ ಬಳಿಕ ಮಾತನಾಡಿದ ಮೋದಿ ಅವರು, ''ನಮ್ಮದು ‘ಕಿಸಾನ್ ಕಲ್ಯಾಣ’ (ರೈತರ ಕಲ್ಯಾಣ)ಕ್ಕೆ ಸಂಪೂರ್ಣ ಬದ್ಧವಾಗಿರುವ ಸರ್ಕಾರ. ಆದ್ದರಿಂದ, ಅಧಿಕಾರ ವಹಿಸಿಕೊಂಡ ಮೇಲೆ ಸಹಿ ಮಾಡಿದ ಮೊದಲ ಕಡತವು ರೈತರಿಗೆ ಸಂಬಂಧಿಸಿದೆ. ಮುಂದಿನ ದಿನಗಳಲ್ಲಿ ನಾವು ರೈತರು ಮತ್ತು ಕೃಷಿ ಕ್ಷೇತ್ರಕ್ಕಾಗಿ ಇನ್ನಷ್ಟು ಮಹತ್ವದ ಕೆಲಸ ಮಾಡಲು ನಿರ್ಧರಿಸಿದ್ದೇವೆ'' ಎಂದು ಅವರು ತಿಳಿಸಿದರು.