ಹೈದರಾಬಾದ್ : ಬಹುತೇಕ ತಂದೆ-ತಾಯಂದಿರು ತಮ್ಮ ಮಕ್ಕಳು ಇಷ್ಟಪಟ್ಟಿದ್ದನ್ನು ಕೊಡಿಸುತ್ತಾರೆ. ಆದ್ರೆ ಕೆಲ ಮಕ್ಕಳು ಮಾತ್ರ ಅಪ್ಪ-ಅಮ್ಮನ ಮೇಲೆ ಗೌರವವಿಟ್ಟು ಅವ್ರು ಕೊಡಿಸಿದ ವಸ್ತುಗಳಿಂದ ಉತ್ತಮ ಹವ್ಯಾಸ ಬೆಳೆಸಿಕೊಳ್ಳುತ್ತಾರೆ. ಆದ್ರೆ ಇಲ್ಲೊಂದು ಪ್ರಕರಣ ಈ ಮಾತಿಗೆ ತದ್ವಿರುದ್ಧವಾಗಿದೆ. ಅಪ್ಪ ಕೊಡಿಸಿದ ಹೊಸ ಬೈಕ್ಅನ್ನು ಮಗ ಕಳ್ಳತನ ಕೃತ್ಯಕ್ಕೆ ಬಳಸಿಕೊಂಡು ಪೊಲೀಸರ ಅತಿಥಿಯಾಗಿದ್ದಾನೆ.
ಹೌದು, ಹೈದರಾಬಾದ್‌ನಲ್ಲಿ ಸೆಲ್ ಫೋನ್ ಕಳ್ಳತನದ ಸರಣಿ ಪ್ರಕರಣಗಳನ್ನು ಭೇದಿಸುವಲ್ಲಿ ಬೈಕ್‌ನಲ್ಲಿನ ಹಿಂಬರಹವೇ ಸಹಕಾರಿಯಾಗಿದೆ. ಕದ್ದ ವಾಹನದ ಮೇಲಿನ ವಿಶಿಷ್ಟ ಬರಹವು ಪೊಲೀಸರನ್ನು ನೇರವಾಗಿ ಆರೋಪಿಗಳ ಬಳಿಗೆ ಕರೆದೊಯ್ದಿದೆ.
ಈ ತಿಂಗಳ 24 ರಂದು ರಾಮಕೃಷ್ಣ ಎಂಬುವರು ಜುಬಿಲಿ ಹಿಲ್ಸ್ ರಸ್ತೆ ಸಂಖ್ಯೆ 25ರ ಆಸ್ಪತ್ರೆಯ ಹೊರಗೆ ಕಾಯುತ್ತಿದ್ದಾಗ ಕೆಟಿಎಂ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಅವರ ಸೆಲ್ ಫೋನ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ನಂತರ ಈ ಕುರಿತಂತೆ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ತನಿಖೆಗೆ ಮುಂದಾದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಿದಾಗ ಬೈಕ್‌ನ ನಂಬರ್ ಪ್ಲೇಟ್ ಅಸ್ಪಷ್ಟವಾಗಿರುವುದು ಕಂಡುಬಂದಿದೆ. ಹೀಗಿದ್ರೂ ಪೊಲೀಸರು ಬೈಕ್‌ನಲ್ಲಿ ಬರೆಯಲಾಗಿದ್ದ "ರೇಸ್ ಮಾಡಲು ಸಿದ್ಧವಾಗಿದೆ" ಎಂಬ ವಿಶಿಷ್ಟವಾದ ಉಲ್ಲೇಖವನ್ನು ಗಮನಿಸಿದ್ದಾರೆ.
ಕಳ್ಳರನ್ನು ಪತ್ತೆ ಹಚ್ಚಲು ನಿರ್ಧರಿಸಿದ ಜುಬಿಲಿ ಹಿಲ್ಸ್ ಪೊಲೀಸರು ಕೆಟಿಎಂ ಶೋರೂಂನೊಂದಿಗೆ ಸೇರಿ ಆ ಪ್ರದೇಶದಲ್ಲಿನ ಎಲ್ಲಾ ಕೆಟಿಎಂ ಬೈಕ್‌ಗಳ ದಾಖಲೆಗಳನ್ನು ಶೋಧಿಸಿದ್ದಾರೆ. ಇಷ್ಟೊಂದು ಮಾಹಿತಿ ನಡುವೆಯೂ ಬೈಕ್‌ನ ಹಿಂದೆ ಬರೆದಿದ್ದ ಬರಹವು ಅವರಿಗೆ ಆರೋಪಿಯನ್ನು ಹಿಡಿಯಲು ಸುಲಭವಾಗಿದೆ.