ಕರ್ನಾಟಕ

karnataka

ETV Bharat / bharat

ರತನ್ ಟಾಟಾ ಅವರೊಂದಿಗಿನ ಅಸಂಖ್ಯಾತ ಸಂವಾದಗಳಿಂದ ನನ್ನ ಮನಸ್ಸು ತುಂಬಿದೆ: ಪ್ರಧಾನಿ ಮೋದಿ - RATAN TATA

ಪಯಣ ಮುಗಿಸಿದ ದಿಗ್ಗಜ ರತನ್​ ಟಾಟಾ ಅವರ ಸಾವಿಗೆ ದೇಶವೇ ಕಂಬನಿ ಮಿಡಿಯುತ್ತಿದೆ. ಅವರ ನಿಧನ ಆಪ್ತರನ್ನು ಕಳೆದುಕೊಂಡ ಭಾವನೆ ಮೂಡಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.

ರತನ್ ಟಾಟಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ.
ರತನ್ ಟಾಟಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ. (PM MODI OFFICIAL X ACCOUNT)

By PTI

Published : Oct 10, 2024, 8:03 AM IST

ಮುಂಬೈ/ದೆಹಲಿ:" ರತನ್ ಟಾಟಾ ಜೀ ಅವರೊಂದಿಗಿನ ಅಸಂಖ್ಯಾತ ಸಂವಾದಗಳಿಂದ ನನ್ನ ಮನಸ್ಸು ತುಂಬಿದೆ" ಎಂದು ರತನ್​ ಟಾಟಾ ಅವರೊಂದಿಗಿನ ಒಡನಾಟವನ್ನು ಪ್ರಧಾನಿ ನರೇಂದ್ರ ಮೊದಿ ಅವರು ನೆನೆಪಿಸಿಕೊಂಡಿದ್ದು, ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರತನ್ ಟಾಟಾ ಅವರೊಂದಿಗಿನ ಹಲವು ಫೋಟೋಗಳನ್ನು ಹಂಚಿಕೊಂಡಿರುವ ಮೋದಿ ಅವರು, " ರತನ್​ ಟಾಟಾ ಜಿ ಅವರು ಒಬ್ಬ ದಾರ್ಶನಿಕ ನಾಯಕ, ಸಹಾನುಭೂತಿಯ ಆತ್ಮ ಮತ್ತು ಅಸಾಧಾರಣ ಮನುಷ್ಯ. ಟಾಟಾ ಅವರು ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ವ್ಯಾಪಾರ ಸಂಸ್ಥೆಗಳಲ್ಲಿ ಒಂದಕ್ಕೆ ಸ್ಥಿರ ನಾಯಕತ್ವವನ್ನು ಒದಗಿಸಿದರು. ಅವರ ನಮ್ರತೆ, ದಯೆ ಮತ್ತು ನಮ್ಮ ಸಮಾಜವನ್ನು ಉತ್ತಮಗೊಳಿಸುವ ಅಚಲವಾದ ಬದ್ಧತೆಗೆ ಧನ್ಯವಾದಗಳು".

ರತನ್ ಟಾಟಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ. (PM MODI OFFICIAL X ACCOUNT)

"ರತನ್ ಟಾಟಾ ಜಿ ಅವರಲ್ಲಿನ ವಿಶೇಷವಾದ ಅಂಶವೆಂದರೆ 'ದೊಡ್ಡ ಕನಸುಗಳನ್ನು ಕಾಣುವುದು ಮತ್ತು ಅದನ್ನು ಸಮಾಜಕ್ಕೆ ಹಿಂತಿರುಗಿಸುವುದು'. ಅವರು ಶಿಕ್ಷಣ, ಆರೋಗ್ಯ ರಕ್ಷಣೆ, ನೈರ್ಮಲ್ಯ, ಪ್ರಾಣಿ ಕಲ್ಯಾಣಗಳ ಮುಂತಾದ ಸಾಮಾಜಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ರತನ್ ಟಾಟಾ ಅವರೊಂದಿಗಿನ ಅಗಣಿತ ಸಂವಾದಗಳಿಂದ ನನ್ನ ಮನಸ್ಸು ತುಂಬಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಗುಜರಾತ್‌ನಲ್ಲಿ ಆಗಾಗ ಭೇಟಿಯಾಗುತ್ತಿದ್ದೆ. ನಾವು ಹಲವು ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದವು. ನಾನು ದೆಹಲಿಗೆ ಬಂದಾಗ ಈ ಸಂವಾದಗಳು ಮುಂದುವರೆಯುತ್ತಿದ್ದವು. ಅವರ ನಿಧನದಿಂದ ತೀವ್ರ ನೋವಾಗಿದೆ. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳೊಂದಿಗೆ ಇವೆ. ಓಂ ಶಾಂತಿ" ಎಂದು ಪಿಎಂ ಅವರು ಭಾವನಾತ್ಮಕವಾಗಿ ಬರೆದು ರತನ್​ ಟಾಟಾ ಅವರೊಂದಿಗಿನ ಫೋಟೋದೊಂದಿಗೆ ಹಂಚಿಕೊಂಡಿದ್ದಾರೆ.

ದೇಶಕ್ಕೆ, ಮಹಾರಾಷ್ಟ್ರಕ್ಕೆ ತುಂಬಲಾರದ ನಷ್ಟ-ಡಿಸಿಎಂ ದೇವೇಂದ್ರ ಫಡ್ನವೀಸ್:"ರತನ್ ಟಾಟಾ ಅವರ ನಿಧನವು ದೇಶ ಮತ್ತು ಮಹಾರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ" ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬೇಸರ ವ್ಯಕ್ತಪಡಿಸಿದ್ದಾರೆ.

"ಹಿರಿಯ ಕೈಗಾರಿಕೋದ್ಯಮಿಯಾಗಿದ್ದ ರತನ್ ಟಾಟಾ ಅವರು ಉದಾರತೆ, ಮಾನವೀಯತೆ ಮತ್ತು ನಂಬಿಕೆಯ ಪ್ರತಿರೂಪ" ಎಂದು ಬಣ್ಣಿಸಿರುವ ಡಿಸಿಎಂ ದೇವೇಂದ್ರ ಫಡ್ನವೀಸ್ ಅವರು ಟಾಟಾ ಅವರು ಯಶಸ್ವಿ ಕೈಗಾರಿಕೋದ್ಯಮಿಯಾಗಿ ಜಗತ್ತಿಗೆ ಪರಿಚಿತ. ತಮ್ಮ ಸಮೂಹ ಸಂಸ್ಥೆಯನ್ನು ಯಶಸ್ವಿಯಾಗಿ ನಡೆಸಿದಲ್ಲದೇ ಹಲವಾರು ಸಾಮಾಜಿಕ ಕ್ಷೇತ್ರಗಳಿಗೆ ಕೊಡುಗೆ ನೀಡಿದ್ದು ಸಮಾಜಕ್ಕೆ ಐಕಾನ್​ ಆಗಿದ್ದರು. ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಅಪೌಷ್ಟಿಕತೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಸೇವೆ ಗಮನಾರ್ಹ. ಟಾಟಾ ಟ್ರಸ್ಟ್ ಕ್ಯಾನ್ಸರ್ ರೋಗಿಗಳಿಗಾಗಿ ಮಾಡಿದ ಕೆಲಸ ಅಥವಾ ಪ್ರಾಣಿಗಳಿಗಾಗಿ ಕಟ್ಟಿರುವ ಆಸ್ಪತ್ರೆಗಳಿಂದ ಅವರಿಗಿದ್ದ ಸಹಾಯದ ಮನೋಭಾವ, ಮಿಡಿಯುವ ಹೃದಯ, ಅವರಲ್ಲಿದ್ದ ಅನುಕಂಪ ಗೋಚರಿಸುತ್ತದೆ" ಎಂದು ಹೆಳುತ್ತಾ ಡಿಸಿಎಂ ಭಾವುಕರಾದರು.

ರತನ್ ಟಾಟಾ ಅವರೊಂದಿಗೆ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ (IANS)

"ರತನ್​ ಟಾಟಾ ಅವರು ರಾಜ್ಯದ ಅಭಿವೃದ್ಧಿಗಾಗಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ" ಎಂದ ಫಡ್ನವೀಸ್ ಅವರು ಹೂಡಿಕೆಗಳನ್ನು ಆಕರ್ಷಿಸಲು 'ಮ್ಯಾಗ್ನೆಟಿಕ್ ಮಹಾರಾಷ್ಟ್ರ' ಎಂಬ ಅಭಿಯಾನಕ್ಕೆ ಅವರು ನೀಡಿದ ಕೊಡುಗೆಯನ್ನು ನೆನಪಿಸಿಕೊಂಡರು.

"ಖ್ಯಾತ ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿ ರತನ್​ ಟಾಟಾ ಅವರ ನಿಧನದ ಸುದ್ದಿಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಕೈಗಾರಿಕೋದ್ಯಮಿಯಾಗಿ ಅವರ ಅಮೂಲ್ಯ ಕೊಡುಗೆಯ ಹೊರತಾಗಿ, ಅವರು ತಮ್ಮ ಉಪಕಾರ ಮನೋಭಾವ ಮತ್ತು ಸಹಾನುಭೂತಿಯ ಪರಂಪರೆಯನ್ನು ಬಿಟ್ಟು ಹೋಗುತ್ತಾರೆ. ಇದು ಅವರಿಗೆ ತಮ್ಮ ದೇಶದ ಮೇಲಿದ್ದ ಅಪಾರ ಪ್ರೀತಿಯನ್ನು ಒತ್ತಿ ಹೇಳುತ್ತದೆ" ಎಂದು ಮಹಾರಾಷ್ಟ್ರದ ಮತ್ತೋರ್ವ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.

ರತನ್​ ಟಾಟಾ ಮುನ್ನಡೆದ ಭಾರತದ ಮಗ:ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಾಡೆತ್ತಿವಾರ್ ಅವರು, "ರತನ್ ಟಾಟಾ ಅವರು ಉದ್ಯಮ ಹಾಗೂ ಲೋಕೋಪಕಾರ ಕ್ಷೇತ್ರಗಳಲ್ಲಿ ಲೋಕಕ್ಕೆ ಮಾದರಿಯಾಗಿ ಮುನ್ನಡೆದ ಭಾರತದ ಮಗ. ನಿಸ್ವಾರ್ಥವಾಗಿ ದೇಶಕ್ಕೆ ಸೇವೆ ಸಲ್ಲಿಸಿರುವ ಟಾಟಾ ಅವರು ಸಮಾಜ ಮತ್ತು ಮಾನವೀಯತೆಯ ಸೇವೆಗೆ ಉಜ್ವಲ ಉದಾಹರಣೆಯಾಗಿದ್ದಾರೆ" ಎಂದು ಬಣ್ಣಿಸಿದ್ದಾರೆ.

ಇನ್ನು ಎನ್‌ಸಿಪಿ (ಎಸ್‌ಪಿ) ನಾಯಕ ಅನಿಲ್ ದೇಶಮುಖ್ ಅವರು ಕೂಡ ರತನ್​ ಟಾಟಾ ಅವರ ನಿಧನ ಸಂತಾಪ ವ್ಯಕ್ತಪಡಿಸಿದ್ದು, "ಭಾರತೀಯ ಉದ್ಯಮವು ಸರಿಪಡಿಸಲಾಗದ ನಷ್ಟವನ್ನು ಅನುಭವಿಸಿದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಗೌರವಗಳೊಂದಿಗೆ ರತನ್ ಟಾಟಾ ಅಂತ್ಯಸಂಸ್ಕಾರ: ಮಹಾರಾಷ್ಟ್ರ ಸಿಎಂ

ABOUT THE AUTHOR

...view details