ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನ ದೇಶದ ಅತಿದೊಡ್ಡ ಸಮುದ್ರ ಸೇತುವೆ (ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತುವೆ)ಯನ್ನು ಜನವರಿ ತಿಂಗಳ ಎರಡನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಇದು ಮುಂಬೈನ ಸಾರಿಗೆ ವ್ಯವಸ್ಥೆ ಮೇಲೆ ಅದ್ಭುತ ಪರಿಣಾಮ ಬೀರಿದೆ. ಇದೀಗ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಭಾರತ ಮುನ್ನುಗ್ಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಅಟಲ್ ಸೇತುವೆ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ, "ಎರಡು ಗಂಟೆಗಳ ಪ್ರಯಾಣವನ್ನು ಕೇವಲ 20 ನಿಮಿಷಗಳಲ್ಲಿ ಮಾಡಬಹುದು. ನೀವದನ್ನು ನಂಬುವುದಿಲ್ಲ. ಇಂಥದ್ದೊಂದು ಮಾರ್ಗ ಸಾಧ್ಯವಿತ್ತು ಎಂದು ಯಾರು ಯೋಚಿಸಿದ್ದರು ಹೇಳಿ?. ಅಂತಹ ಅದ್ಭುತ ಮೂಲಸೌಕರ್ಯಗಳಿಂದ ನವಿ ಮುಂಬೈನಿಂದ ಮುಂಬೈವರೆಗೆ, ಗೋವಾದಿಂದ ಮುಂಬೈವರೆಗೆ, ಬೆಂಗಳೂರಿನಿಂದ ಮುಂಬೈವರೆಗೆ ಎಲ್ಲಾ ಪ್ರಯಾಣಗಳು ಸುಲಭವಾದರೆ ಹೇಗಿರುತ್ತದೆ. ಇದು ನಮಗೆ ಹೆಮ್ಮೆ ತರುವ ವಿಚಾರ'' ಎಂದು ತಿಳಿಸಿದರು.
"ಇಲ್ಲ (no) ಅನ್ನೋದನ್ನು ಕೇಳುವುದನ್ನು ಭಾರತ ನಿಲ್ಲಿಸಿಬಿಟ್ಟಿದೆ. ಭಾರತೀಯರು ಇನ್ಮುಂದೆ ಅದಕ್ಕೆ ಸಿದ್ಧರಿಲ್ಲ. ಹಾಗಾಗಿ ನನಗೀಗ 'ಭಾರತ ಎಲ್ಲೂ ನಿಲ್ಲುವುದಿಲ್ಲ' ಎಂದು ಅನಿಸುತ್ತಿದೆ. ದೇಶದ ಬೆಳವಣಿಗೆಯನ್ನು ಗಮನಿಸಿ. ಅದ್ಭುತವಾಗಿದೆ. ಕಳೆದ 10 ವರ್ಷಗಳಲ್ಲಿನ ದೇಶದ ಬೆಳವಣಿಗೆ ಪ್ರಶಂಸನೀಯ. ಮೂಲಸೌಕರ್ಯ, ಯೋಜನೆಗಳು, ರಸ್ತೆ ಯೋಜನೆ ಎಲ್ಲವೂ ಅದ್ಭುತವಾಗಿವೆ. ಇದು ನಮ್ಮ ಸಮಯ ಎಂದು ನನಗನಿಸುತ್ತಿದೆ. ಏಳು ವರ್ಷಗಳಲ್ಲಿ ಆ ಪ್ರೊಜೆಕ್ಟ್ (20 ಕಿ.ಮೀ) ಪೂರ್ಣಗೊಂಡಿದೆ ಎಂಬುದನ್ನು ಈಗಷ್ಟೇ ತಿಳಿದುಕೊಂಡೆ. ಅದ್ಭುತ, ನನಗೆ ಮಾತೇ ಬರುತ್ತಿಲ್ಲ'' ಎಂದು ತಿಳಿಸಿದರು.