ವಿಜಯವಾಡ(ಆಂಧ್ರ ಪ್ರದೇಶ):ಆಂಧ್ರ ಪ್ರದೇಶದ ರಾಜಧಾನಿಯಾಗಿ ನಿರ್ಮಾಣವಾಗುತ್ತಿರುವ ಅಮರಾವತಿ ನಗರ ಅಭಿವೃದ್ಧಿಗೆ ರಾಮೋಜಿ ಗ್ರೂಪ್ ವತಿಯಿಂದ 10 ಕೋಟಿ ರೂಪಾಯಿ ದೇಣಿಗೆ ಘೋಷಿಸಲಾಗಿದೆ. ಈ ಮೂಲಕ ಅಮರಾವತಿ ನಗರ ಕಟ್ಟುವ ದೂರದೃಷ್ಟಿ ಹೊಂದಿದ್ದ ಅಕ್ಷರ ಯೋಧ, ಮಾಧ್ಯಮ ದಿಗ್ಗಜ ದಿವಂಗತ ರಾಮೋಜಿ ರಾವ್ ಅವರ ಕನಸನ್ನು ಸಂಸ್ಥೆ ಬೆಂಬಲಿಸಿದೆ.
ಆಂಧ್ರ ಸರ್ಕಾರದಿಂದ ವಿಜಯವಾಡದ ಅನುಮೋಲು ಗಾರ್ಡನ್ಸ್ನಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಪದ್ಮವಿಭೂಷಣ ದಿ.ರಾಮೋಜಿ ರಾವ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಈನಾಡು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ರಾಮೋಜಿ ರಾವ್ ಅವರ ಪುತ್ರ ಚೆರುಕುರಿ ಕಿರಣ್ ರಾವ್, "ಅಮರಾವತಿ ನಗರ ನಿರ್ಮಾಣಕ್ಕೆ ರಾಮೋಜಿ ಗ್ರೂಪ್ ಬೆನ್ನೆಲುಬಾಗಿ ನಿಲ್ಲಲಿದೆ. ರಾಜಧಾನಿ ನಿರ್ಮಾಣ ಕಾರ್ಯಕ್ಕೆ 10 ಕೋಟಿ ರೂಪಾಯಿ ನೀಡಲಾಗುವುದು" ಎಂದು ಪ್ರಕಟಿಸಿದರು.
"ಅಮರಾವತಿ ಮಹಾನಗರವಾಗಿ ನಿರ್ಮಾಣ ಆಗಬೇಕೆಂಬುದು ತಂದೆಯ ಬಯಕೆಯಾಗಿತ್ತು. ನಗರಕ್ಕೆ ಅಮರಾವತಿ ಎಂದು ನಾಮಕರಣ ಮಾಡಿದ್ದೇ ರಾಮೋಜಿ ರಾವ್ ಅವರು. ಹೀಗಾಗಿ, ಈ ನಗರದ ಅಭಿವೃದ್ಧಿಗೆ ತಂದೆಯವರ ಪರವಾಗಿ ನಮ್ಮ ಕುಟುಂಬ ಕಿರು ಕಾಣಿಕೆ ನೀಡಲು ಬಯಸಿದೆ" ಎಂದು 10 ಕೋಟಿ ರೂಪಾಯಿಯ ಚೆಕ್ ಅನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಹಸ್ತಾಂತರಿಸಿದರು.