ಕೋಲ್ಕತ್ತಾ (ಪಶ್ಚಿಮ ಬಂಗಾಳ):ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಪಶ್ಚಿಮ ಬಂಗಾಳದ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಮುಖ್ಯಸ್ಥರಾದ ಸ್ವಾಮಿ ಸ್ಮರಣಾನಂದ ಮಹಾರಾಜ್ ಅವರು ತಮ್ಮ 95ನೇ ಇಳಿ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಗಳಿಂದ ನಿಧನರಾದರು ಎಂದು ರಾಮಕೃಷ್ಣ ಮಿಷನ್ ಬುಧವಾರ ತಿಳಿಸಿದೆ. ಮಹಾರಾಜರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸ್ಮರಣಾನಂದರು ವಯೋಸಹಜ ಕಾಯಿಲೆಗಳಿಂದಾಗಿ ಮಾರ್ಚ್ 5 ರಂದು ಆಶ್ರಮದಿಂದ ನಡೆಸಲಾಗುತ್ತಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಈ ವೇಳೆ, ರಾಜ್ಯ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಪತ್ರೆಯಲ್ಲಿ ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಇದೀಗ ಆರೋಗ್ಯದಲ್ಲಿ ಚೇತರಿಕೆ ಕಾಣದೇ ಅವರು ರಾಮನ ಚರಣಗಳಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.
ಪಿಎಂ ಮೋದಿ ಸಂತಾಪ:ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ನ ಮುಖ್ಯಸ್ಥರಾದ ಶ್ರೀಮತ್ ಸ್ವಾಮಿ ಸ್ಮರಣಾನಂದ ಜಿ ಮಹಾರಾಜ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಶ್ರೀಗಳು ತಮ್ಮ ಜೀವನವನ್ನು ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ಸೇವೆಗೆ ಮುಡಿಪಾಗಿಟ್ಟವರು. ಅವರು ಅಸಂಖ್ಯಾತ ಹೃದಯ ಮತ್ತು ಮನಸ್ಸುಗಳಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರಲ್ಲಿದ್ದ ಕರುಣೆ, ಸಹಾನುಭೂತಿ ಮತ್ತು ಬುದ್ಧಿವಂತಿಕೆಯು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ ಎಂದಿದ್ದಾರೆ.
ಮಠ ಮತ್ತು ಶ್ರೀಗಳ ಜೊತೆಗೆ ಹಲವು ವರ್ಷಗಳಿಂದ ನಿಕಟ ಸಂಬಂಧ ಹೊಂದಿದ್ದೇನೆ. 2020 ರಲ್ಲಿ ಬೇಲೂರು ಮಠಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದಿದ್ದೆ. ಇತ್ತೀಚೆಗೆ ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದೆ. ಶ್ರೀಗಳನ್ನು ಕಳೆದುಕೊಂಡ ದುಃಖ ನಮ್ಮಲ್ಲಿದ್ದೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.