ಅಲ್ಲು ಅರ್ಜುನ್ ಮುಖ್ಯಭೂಮಿಕೆಯ ಬ್ಲಾಕ್‌ಬಸ್ಟರ್ 'ಪುಷ್ಪ 2: ದಿ ರೂಲ್' ನಂತರ, ತೆಲುಗು ಚಿತ್ರರಂಗದಿಂದ ಮತ್ತೋರ್ವ ಸೂಪರ್ ಸ್ಟಾರ್ ರಾಮ್ ಚರಣ್ ಅಭಿನಯದ 'ಗೇಮ್ ಚೇಂಜರ್' ಇಂದು ಅದ್ಧೂರಿಯಾಗಿ ತೆರೆಗಪ್ಪಳಿಸಿದೆ.
ಹೊಸ ವರ್ಷದಲ್ಲಿ ತಮ್ಮ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಆರ್‌ಆರ್‌ಆರ್ ಸ್ಟಾರ್ ಶುರು ಮಾಡಿದ್ದಾರೆ. ಖ್ಯಾತ ನಿರ್ದೆಶಕ ಎಸ್.ಶಂಕರ್ ನೇತೃತ್ವದಲ್ಲಿ ಬಂದಿರುವ ಗೇಮ್ ಚೇಂಜರ್ ಚಿತ್ರದಲ್ಲಿ ರಾಮ್ ಚರಣ್ ಜೊತೆಗೆ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾ ಆರಂಭಿಕವಾಗಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ರಾಮ್ ಚರಣ್ ಸೋಲೋ ಹೀರೋ ಆಗಿ ನಾಲ್ಕು ವರ್ಷಗಳ ಬಳಿಕ ತೆರೆಮೇಲೆ ಕಾಣಿಸಿಕೊಂಡಿರುವುದಿಂದ ಚಿತ್ರದ ಪ್ರೀ ಬ್ಯುಸಿನೆಸ್ ಕೂಡಾ ಉತ್ತಮವಾಗಿದೆ.
ಗೇಮ್ ಚೇಂಜರ್ ಕಲೆಕ್ಷನ್ ಅಂದಾಜು (ಮೊದಲ ದಿನ): ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಗೇಮ್ ಚೇಂಜರ್ ಚಿತ್ರದ ಮೊದಲ ದಿನದ ಅಡ್ವಾನ್ಸ್ ಬುಕಿಂಗ್ ಎಲ್ಲಾ ಭಾಷೆ ಒಳಗೊಂಡಂತೆ 43.55 ಕೋಟಿ ರೂ.ಗಳನ್ನು ದಾಟಿದೆ. ಮತ್ತೊಂದೆಡೆ, ಸಿನಿಮಾ ವ್ಯವಹಾರ ವಿಶ್ಲೇಷಕ ಮನೋಬಾಲ ವಿಜಯಬಾಲನ್ ಅವರು ವಿಶ್ವಾದ್ಯಂತ ಚಿತ್ರ 65 ಕೋಟಿ ರೂ.ಗಳನ್ನು ದಾಟಲಿದೆ ಎಂದು ತಿಳಿಸಿದ್ದಾರೆ. ಗೇಮ್ ಚೇಂಜರ್ ಈ ಅಂದಾಜುಗಳನ್ನು ಮೀರುವ ಸಾಧ್ಯತೆಯಿದೆ ಎಂದು ವರದಿಗಳು ಸೂಚಿಸಿವೆ.
ರಾಮ್ ಚರಣ್ ಮತ್ತು ನಿರ್ದೇಶಕ ಶಂಕರ್ ಕಾಂಬಿನೇಶನ್ನ ಮೊದಲ ಸಿನಿಮಾ ಇದು. ಪೊಲಿಟಿಕಲ್ ಆ್ಯಕ್ಷನ್ ಥ್ರಿಲ್ಲರ್ನ ವಿಜಯ ನಟ ನಿರ್ದೇಶಕರಿಬ್ಬರಿಗೂ ಮಹತ್ವದ್ದು. ಏಕೆಂದರೆ ಆಸ್ಕರ್ ವೇದಿಕೆ ಏರಿದ್ದ ಆರ್‌ಆರ್‌ಆರ್ ಬಳಿಕ ಬರುತ್ತಿರುವ ರಾಮ್ ಚರಣ್ ಅವರ ಮೊದಲ ಸಿನಿಮಾ ಆಗಿರುವ ಹಿನ್ನೆಲೆಯಲ್ಲಿ ಸೋಲೋ ಸ್ಟಾರ್ ಪವರ್ ಸಾಬೀತುಪಡಿಸಿಕೊಳ್ಳಬೇಕಿದೆ.
ಇತ್ತೀಚೆಗೆ ಬಿಡುಗಡೆಯಾದ 'ಇಂಡಿಯನ್ 2' ಚಿತ್ರದ ನಿರೀಕ್ಷೆ ತಲುಪದ ಹಿನ್ನೆಲೆಯಲ್ಲಿ ನಿರ್ದೇಶಕ ಶಂಕರ್ ಅವರಿಗೆ 'ಗೇಮ್ ಚೇಂಜರ್' ಗೆಲುವು ಅಗತ್ಯವಿದ್ದು, ಈ ಸಿನಿಮಾ ಮೂಲಕ ಮತ್ತೆ ಪುಟಿದೇಳುವ ಭರವಸೆ ಹೊಂದಿದ್ದಾರೆ.
BREAKING: Game Changer advance ZOOMS past ₹6⃣5⃣ cr at the WW Box Office.
— Manobala Vijayabalan (@ManobalaV) January 9, 2025
ಪ್ರೀ ಸೇಲ್ಸ್ ಬ್ಯುಸಿನೆಸ್: ಗೇಮ್ ಚೇಂಜರ್ ಬಿಡುಗಡೆ ಪೂರ್ವ ಪ್ರಚಾರ ದೊಡ್ಡ ಮಟ್ಟದಲ್ಲೇ ನಡೆದಿದ್ದು, ಬಾಕ್ಸ್ ಆಫೀಸ್ ಪ್ರಯಾಣ ಉತ್ತಮವಾಗಿ ಸಾಗುವ ನಿರೀಕ್ಷೆ ಹೊಂದಿದ್ದಾರೆ. ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ, ಚಿತ್ರದ ಥಿಯೇಟ್ರಿಕಲ್ ಹಕ್ಕುಗಳ ವ್ಯವಹಾರ 122 ಕೋಟಿ ರೂ.ಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಇಂದು ತೆರೆಕಾಣಬೇಕಿದ್ದ "ಸಂಜು ವೆಡ್ಸ್ ಗೀತಾ 2" ಮುಂದೂಡಿಕೆ: ಹೊಸ ಬಿಡುಗಡೆ ದಿನಾಂಕ?
ಗೇಮ್ ಚೇಂಜರ್ 'ರಂಗಸ್ಥಳಂ' ಕಲೆಕ್ಷನ್ ಮೀರಿಸುವುದೇ?: ರಾಮ್ ಚರಣ್ ಅವರ ಬಿಗ್ ಹಿಟ್ ರಂಗಸ್ಥಳಂ ಕಲೆಕ್ಷನ್ನನ್ನು ಗೇಮ್ಚೇಂಜರ್ ಮೀರಿಸುತ್ತದೆಯೇ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾತರರಾಗಿದ್ದಾರೆ. ಇದು ವಿಶ್ವಾದ್ಯಂತ ಸುಮಾರು 220 ಕೋಟಿ ರೂ. ಗಳಿಸಿತ್ತು. ಅದಾಗ್ಯೂ, ಈವರೆಗಿನ ರಾಮ್ಚರಣ್ ಅವರ ಅತಿದೊಡ್ಡ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್ ಆಗಿದ್ದು, ಇದರಲ್ಲಿ ಜೂನಿಯರ್ ಎನ್‌ಟಿಆರ್ ಕೂಡಾ ಪ್ರಮುಖ ಪಾತ್ರ ವಹಿಸಿದ್ದರು. ಸೋಲೋ ಹೀರೋ ಆಗಿ ನಾಲ್ಕು ವರ್ಷಗಳ ಬಳಿಕ ಬಂದ ಸಿನಿಮಾ ಗೇಮ್ ಚೇಂಜರ್.
ಇದನ್ನೂ ಓದಿ: ಟಾಕ್ಸಿಕ್ ಗ್ಲಿಂಪ್ಸ್ 'ಟ್ರೆಂಡಿಂಗ್ #1': ರಾಕಿಭಾಯ್ನ ಗ್ಯಾಂಗ್ಸ್ಟರ್ ಅವತಾರಕ್ಕೆ ಫ್ಯಾನ್ಸ್ ಕಾತರ
ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ನಿರ್ಮಿಸಿರುವ ಗೇಮ್ ಚೇಂಜರ್ ಚಿತ್ರದಲ್ಲಿ ಎಸ್.ಜೆ.ಸೂರ್ಯ, ನಾಸರ್, ಬ್ರಹ್ಮಾನಂದಂ, ವೆನ್ನೆಲ ಕಿಶೋರ್, ಅಂಜಲಿ, ಮುರಳಿ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.