ನವದೆಹಲಿ: ಮುಂದಿನ ತಿಂಗಳು ರಾಜ್ಯಸಭೆಯ 12 ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಯ ನಂತರ ಬಿಜೆಪಿ ನೇತೃತ್ವದ ಎನ್ಡಿಎ ರಾಜ್ಯಸಭೆಯಲ್ಲಿ ಸ್ಪಷ್ಟ ಬಹುಮತವನ್ನು ಸಾಧಿಸುವ ನಿರೀಕ್ಷೆಯಿದೆ. ಇದು ವಕ್ಫ್ (ತಿದ್ದುಪಡಿ) ಮಸೂದೆಯಂತಹ ಪ್ರಮುಖ ಶಾಸನಗಳಿಗೆ ಅನುಮೋದನೆ ಪಡೆಯಲು ಪಕ್ಷಕ್ಕೆ ಅನುಕೂಲ ಮಾಡಿಕೊಡಲಿದೆ.
ಪ್ರಸ್ತುತ 229 ಸದಸ್ಯ ಬಲದ ಮೇಲ್ಮನೆಯಲ್ಲಿ ಬಿಜೆಪಿ 87 ಸಂಸದರನ್ನು ಹೊಂದಿದ್ದರೆ, ಮಿತ್ರಪಕ್ಷಗಳೊಂದಿಗೆ ಈ ಸಂಖ್ಯೆ 105 ಆಗಿದೆ. ಸಾಮಾನ್ಯವಾಗಿ ಸರ್ಕಾರದೊಂದಿಗೆ ಮತ ಚಲಾಯಿಸುವ ಆರು ನಾಮನಿರ್ದೇಶಿತ ಸದಸ್ಯರನ್ನು ಸೇರಿಸಿದರೆ ಎನ್ಡಿಎ ಬಲ 111 ಕ್ಕೆ ಏರಿಕೆಯಾಗುತ್ತದೆ. ಇದು ಅರ್ಧದಷ್ಟು ಬಲವಾದ 115ರ ಸಂಖ್ಯೆಗೆ ನಾಲ್ಕು ಸ್ಥಾನ ಕಡಿಮೆಯಾಗಿದೆ.
ಮೇಲ್ಮನೆಯಲ್ಲಿ ಕಾಂಗ್ರೆಸ್ 26 ಸದಸ್ಯರನ್ನು ಹೊಂದಿದೆ. ಅದರ ಮಿತ್ರಪಕ್ಷಗಳ 58 ಸದಸ್ಯರನ್ನು ಸೇರಿಸಿದರೆ, ಪ್ರತಿಪಕ್ಷಗಳ ಮೈತ್ರಿಕೂಟದ ಸಂಖ್ಯೆ 84 ಕ್ಕೆ ಏರಿಕೆಯಾಗುತ್ತದೆ. ವೈಎಸ್ಆರ್ ಕಾಂಗ್ರೆಸ್ ಪಕ್ಷ 11 ಸದಸ್ಯರನ್ನು ಹೊಂದಿದ್ದರೆ, ಬಿಜೆಡಿ 8 ಸದಸ್ಯರನ್ನು ಹೊಂದಿದೆ.
ಒಂಬತ್ತು ರಾಜ್ಯಗಳಲ್ಲಿ ಖಾಲಿ ಇರುವ 12 ರಾಜ್ಯಸಭಾ ಸ್ಥಾನಗಳಿಗೆ ಸೆಪ್ಟೆಂಬರ್ 3 ರಂದು ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗವು ಪ್ರತಿ ಸ್ಥಾನಕ್ಕೆ 12 ಪ್ರತ್ಯೇಕ ಚುನಾವಣೆಗಳನ್ನು ಘೋಷಿಸಿದ್ದು, ಆಯಾ ರಾಜ್ಯಗಳಲ್ಲಿರುವ ಆಡಳಿತಾರೂಢ ಪಕ್ಷಕ್ಕೆ ಇದರಿಂದ ಸ್ಪಷ್ಟವಾಗಿ ಲಾಭವಾಗಲಿದೆ.
ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಚುನಾವಣೆಯಲ್ಲಿ 12 ಸ್ಥಾನಗಳ ಪೈಕಿ 11 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಈ ಮೂಲಕ 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಎನ್ಡಿಎ ಬಲ ಅರ್ಧದಷ್ಟು ಸ್ಥಾನಗಳನ್ನು ದಾಟಿ 122 ಸ್ಥಾನಗಳಿಗೆ ಏರಿಕೆಯಾಗಲಿದೆ. ಸದ್ಯ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನೂ ವಿಧಾನಸಭೆ ರಚನೆಯಾಗದೇ ಇರುವುದರಿಂದ ಅಲ್ಲಿನ ನಾಲ್ಕು ಸ್ಥಾನಗಳು ಖಾಲಿ ಇವೆ. ಹೀಗಾಗಿ ರಾಜ್ಯಸಭೆಯ ಪರಿಣಾಮಕಾರಿ ಬಲವು 241ಕ್ಕೆ ಇಳಿಕೆಯಾಗಿದೆ.
ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಸರ್ಬಾನಂದ ಸೋನೊವಾಲ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಹಾಲಿ ಸದಸ್ಯರು ಲೋಕಸಭೆಗೆ ಆಯ್ಕೆಯಾದ ಕಾರಣ ಹತ್ತು ರಾಜ್ಯಸಭಾ ಸ್ಥಾನಗಳು ಖಾಲಿಯಾಗಿವೆ. ಇದಲ್ಲದೆ ತೆಲಂಗಾಣ ಮತ್ತು ಒಡಿಶಾದ ಎರಡು ಸ್ಥಾನಗಳಿಗೆ ಕೂಡ ಉಪಚುನಾವಣೆ ನಡೆಯಲಿದೆ.
ತೆಲಂಗಾಣದ ಕೆ.ಕೇಶವ ರಾವ್ ಅವರು ಇತ್ತೀಚೆಗೆ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ತೊರೆದು ಕಾಂಗ್ರೆಸ್ ಸೇರಿದ ನಂತರ ಸದನಕ್ಕೆ ರಾಜೀನಾಮೆ ನೀಡಿದ್ದರೆ, ಬಿಜು ಜನತಾ ದಳ (ಬಿಜೆಡಿ) ಸಂಸದೆ ಮಮತಾ ಮೊಹಾಂತ ತಮ್ಮ ರಾಜ್ಯಸಭಾ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಬಿಜೆಪಿ ಸೇರಿದ್ದಾರೆ.
ಗೋಯಲ್, ಸೋನೊವಾಲ್ ಮತ್ತು ಸಿಂಧಿಯಾ ಅವರಲ್ಲದೆ ರಾಜ್ಯಸಭಾ ಸದಸ್ಯರಾಗಿದ್ದ ಕಾಮಾಕ್ಯ ಪ್ರಸಾದ್ ತಾಸಾ (ಬಿಜೆಪಿ), ಮಿಶಾ ಭಾರತಿ (ಆರ್ಜೆಡಿ), ವಿವೇಕ್ ಠಾಕೂರ್ (ಬಿಜೆಪಿ), ದೀಪೇಂದರ್ ಸಿಂಗ್ ಹೂಡಾ (ಕಾಂಗ್ರೆಸ್), ಉದಯನ್ ರಾಜೆ ಭೋಸ್ಲೆ (ಬಿಜೆಪಿ), ಕೆ.ಸಿ.ವೇಣುಗೋಪಾಲ್ (ಕಾಂಗ್ರೆಸ್) ಮತ್ತು ಬಿಪ್ಲಬ್ ಕುಮಾರ್ ದೇಬ್ (ಬಿಜೆಪಿ) ಇವರೆಲ್ಲರೂ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಲೋಕಸಭಾ ಸಂಸದರಾಗಿದ್ದಾರೆ. ಎಐಎಡಿಎಂಕೆ, ಜೆಡಿಯು, ಎನ್ ಸಿಪಿ, ಜೆಡಿಎಸ್, ಆರ್ಪಿಐ (ಎ), ಶಿವಸೇನೆ, ಆರ್ಎಲ್ಡಿ, ಎನ್ಪಿಪಿ, ಪಿಎಂಕೆ, ತಮಿಳು ಮನಿಲಾ ಕಾಂಗ್ರೆಸ್, ಯುಪಿಪಿಎಲ್ ಇವು ರಾಜ್ಯಸಭೆಯಲ್ಲಿ ಬಿಜೆಪಿಯ ಮಿತ್ರಪಕ್ಷಗಳಾಗಿವೆ.
ಇದನ್ನೂ ಓದಿ : 389 ಎಕರೆಯ ಹಳ್ಳಿಗೆ ವಕ್ಫ್ ಮಂಡಳಿ ಮಾಲೀಕನಂತೆ: ಆಸ್ತಿ ಖರೀದಿ, ಮಾರಾಟಕ್ಕೆ ಬೇಕು ಬೋರ್ಡ್ ಅನುಮತಿ! - Thiruchenthurai land dispute