ನವದೆಹಲಿ: ಕಳೆದೆರಡು ತಿಂಗಳಿನಿಂದ ಬಿಸಿಲ ಪ್ರಕೋಪಕ್ಕೆ ನಲುಗಿದ ರಾಷ್ಟ್ರ ರಾಜಧಾನಿ ದೆಹಲಿಯ ಜನ ಇದೀಗ ಮಳೆಯ ರುದ್ರನರ್ತನದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಗುರುವಾರ ಸುರಿದ ಭಾರೀ ಮಳೆಯಿಂದಾಗಿ ದೆಹಲಿ-ಎನ್ಸಿಆರ್ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡವು. ವಾಹನ ಸವಾರರು ಉಸಿರುಗಟ್ಟಿಸುವ ಟ್ರಾಫಿಕ್ ಸಮಸ್ಯೆ ಅನುಭವಿಸಿದರು.
ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಗುರುವಾರ ಬೆಳಗ್ಗೆ 8.30ರಿಂದ ಶುಕ್ರವಾರ ಬೆಳಗ್ಗೆ 8.30ರವರೆಗೆ 228 ಮಿ.ಮೀ ಮಳೆಯಾಗಿದೆ. 1936ರಲ್ಲಿ ಅಂದರೆ, 88 ವರ್ಷದ ಹಿಂದೆ ದೆಹಲಿಯಲ್ಲಿ 24 ಗಂಟೆಗಳ ಅವಧಿಯಲ್ಲಿ 235.5 ಮಿ.ಮೀ ಮಳೆ ದಾಖಲಾಗಿತ್ತು.
ಸಾಮಾನ್ಯವಾಗಿ, ದೆಹಲಿ ಜೂನ್ನಲ್ಲಿ ದೆಹಲಿ 80.6 ಮಿ.ಮೀ ಮಳೆ ಕಾಣುತ್ತದೆ. ಆದರೆ, ಹವಾಮಾನ ಬದಲಾವಣೆ ವೈಪರೀತ್ಯದಿಂದಾಗಿ ಒಂದೇ ದಿನದಲ್ಲಿ ದಾಖಲೆಯ ಮಳೆ ಸುರಿದಿದ್ದು, ಜನತೆ ನಲುಗಿದ್ದಾರೆ. ಹಲವು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರ ದೈನಂದಿನ ಜೀವನಕ್ಕೆ ತೊಂದರೆಯಾಗಿದೆ.