ನವದೆಹಲಿ:ರೈಲ್ವೆ ಹುದ್ದೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿರುವ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಭಜರಂಗ್ ಪುನಿಯಾ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ದೊರೆಯುವ ಸಾಧ್ಯತೆ ಇದೆ. ಇಬ್ಬರ ರಾಜೀನಾಮೆಯನ್ನು ಇಲಾಖಾಧಿಕಾರಿಗಳು ಅಂಗೀಕರಿಸುವ ಪ್ರಕ್ರಿಯೆ ನಡೆಸುತ್ತಿದ್ದಾರೆ.
ಕುಸ್ತಿಪಟುಗಳ ಸಾಧನೆ ಮೆಚ್ಚಿ ಕ್ರೀಡಾ ಕೋಟಾದಡಿ ಇಬ್ಬರಿಗೆ ಕೇಂದ್ರ ರೈಲ್ವೆ ಇಲಾಖೆಯಲ್ಲಿ ಕೇಂದ್ರ ಸರ್ಕಾರ ಹುದ್ದೆ ನೀಡಿತ್ತು. ಇದೀಗ ಇಬ್ಬರೂ ಎರಡು ದಿನಗಳ ಹಿಂದಷ್ಟೇ ಉದ್ಯೋಗಕ್ಕೆ ರಾಜೀನಾಮೆ ನೀಡಿ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಸೇರಿದ್ದರು. ಪಕ್ಷವು ವಿನೇಶ್ ಫೋಗಟ್ಗೆ ಜುನಾಲಾ ಕ್ಷೇತ್ರದಿಂದ ಕಣಕ್ಕಿಳಿಯಲು ಅವಕಾಶ ಮಾಡಿಕೊಟ್ಟಿದೆ. ಭಜರಂಗ್ಗೆ ಪಕ್ಷದಲ್ಲಿ ಸ್ಥಾನಮಾನ ನೀಡಿದೆ.
ರಾಜೀನಾಮೆ ಬಳಿಕ ನೋಟಿಸ್ ಅವಧಿಯನ್ನು ಪೂರೈಸದ ಮತ್ತು ಪೂರ್ವ ಮಾಹಿತಿ ನೀಡದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಇಬ್ಬರಿಗೆ ಉತ್ತರ ಬಯಸಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಇಬ್ಬರೂ ಪ್ರತಿಕ್ರಿಯಿಸುವ ಮೊದಲೇ ರಾಜೀನಾಮೆ ಅಂಗೀಕರಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣೆಯಲ್ಲಿ ಸ್ಪರ್ಧೆಗಿಲ್ಲ ಅಡ್ಡಿ:ರೈಲ್ವೇ ಮೂಲಗಳ ಪ್ರಕಾರ, ಫೋಗಟ್ ಮತ್ತು ಪುನಿಯಾ ಇಬ್ಬರೂ ಸಾಧ್ಯವಾದಷ್ಟು ಬೇಗ ಪರಿಹಾರ ಬಯಸಿದ್ದಾರೆ. ಹೀಗಾಗಿ ಇಲಾಖೆಯು ಇವರ ರಾಜೀನಾಮೆಯನ್ನು ಅಂಗೀಕರಿಸಿಲು ಆರಂಭಿಸಿದೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಆತಂಕವಿಲ್ಲ. ಇಲಾಖೆಯು ಯಾವುದೇ ಅಡ್ಡಿ ಮಾಡುವ ಸಾಧ್ಯತೆ ಇಲ್ಲ ಎಂದು ತಿಳಿದುಬಂದಿದೆ.