ಬೆಂಗಳೂರು:ಈವರೆಗೆ ಚೇರ್ಕಾರ್ಗಳನ್ನು ಹೊಂದಿದ್ದ ವಂದೇ ಭಾರತ್ ರೈಲುಗಳು ಇನ್ಮುಂದೆ ಸ್ಲೀಪರ್ ಕೋಚ್ ಮಾದರಿಯಲ್ಲಿ ಸಿಗಲಿವೆ. ರೈಲ್ವೆ ಇಲಾಖೆಯು ವಂದೇ ಭಾರತ್ ಸ್ಲೀಪರ್ ಕೋಚ್‌ಗಳ ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಪ್ರಯತ್ನಿಸುತ್ತಿದೆ. ಮುಂದಿನ ಮೂರೇ ತಿಂಗಳಲ್ಲಿ ಸ್ಲೀಪರ್ ಕೋಚ್ ರೈಲುಗಳು ಹಳಿಗೆ ಬರಲಿವೆ.
ಬೆಂಗಳೂರಿನಲ್ಲಿರುವ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BML) ಆವರಣದಲ್ಲಿ ನಿರ್ಮಿಸಲಾಗಿರುವ ವಂದೇ ಭಾರತ್ ಸ್ಲೀಪರ್ ಕೋಚ್ ರೈಲನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಅನಾವರಣಗೊಳಿಸಿದರು. ಜೊತೆಗೆ ರೈಲಿನಲ್ಲಿನ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಂದೇ ಭಾರತ್ ಚೇರ್ ಕಾರ್‌ನ ಯಶಸ್ಸಿನ ನಂತರ ಸ್ಲೀಪರ್ ಕೋಚ್ನ ತಯಾರಿಕೆಯು ಪೂರ್ಣಗೊಂಡಿದೆ. ಮುಂದಿನ ಹತ್ತು ದಿನಗಳ ಕಾಲ ಇವುಗಳ ಮೇಲೆ ಕಠಿಣ ಪ್ರಯೋಗ ಮತ್ತು ಪರೀಕ್ಷೆಗಳು ನಡೆಯಲಿವೆ. ಈ ಪರೀಕ್ಷೆಗಳು ಯಶಸ್ವಿಯಾದ ನಂತರ, ಇನ್ನಷ್ಟು ರೈಲುಗಳ ತಯಾರಿಸಲಾಗುತ್ತದೆ ಎಂದರು.
ಸ್ಲೀಪರ್ ಕೋಚ್‌ಗಳ ವಿಶೇಷತೆ:ವಂದೇ ಭಾರತ್ ಸ್ಲೀಪರ್ ಕೋಚ್‌ಗಳಲ್ಲಿ ರೀಡಿಂಗ್ ಲ್ಯಾಂಪ್‌ಗಳು, ಚಾರ್ಜಿಂಗ್ ಔಟ್‌ಲೆಟ್‌ಗಳು, ಸ್ನ್ಯಾಕ್ ಟೇಬಲ್ ಮತ್ತು ಮೊಬೈಲ್ ಚಾರ್ಜರ್ ಸೌಲಭ್ಯಗಳಿವೆ. ರೈಲ್ವೆ ಅಪಘಾತಗಳನ್ನು ತಡೆಯಲು ‘ಕವಚ’ ವ್ಯವಸ್ಥೆ ಇರಲಿದೆ. ಎಲ್ಲಾ ಕೋಚ್‌ಗಳು ಸ್ಟೇನ್‌ಲೆಸ್ ಸ್ಟೀಲ್ನಿಂದ ರೂಪಿಸಲಾಗಿದೆ. ಜಿಎಫ್ಆರ್ಪಿ ಇಂಟೀರಿಯರ್ ಪ್ಯಾನಲ್ಸ್, ಅಗ್ನಿ ದುರಂತದ ವೇಳೆ ಸ್ವಯಂಚಾಲಿತ ತೆರೆದುಕೊಳ್ಳುವ ಬಾಗಿಲುಗಳು, ಸುಧಾರಿತ ಸೌಲಭ್ಯಗಳುಳ್ಳ ಶೌಚಾಲಯಗಳು, ಹೊಸ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾದ ಸೀಟ್ ಕುಶನ್‌ಗಳನ್ನು ಹೊಂದಿದೆ.
ವಂದೇ ಭಾರತ್ ಸ್ಲೀಪರ್ ರೈಲು 16 ಕೋಚ್‌ಗಳನ್ನು ಹೊಂದಿರಲಿದೆ. ಇದರಲ್ಲಿ 823 ಸೀಟುಗಳು ಇರಲಿವೆ. ಇವುಗಳಲ್ಲಿ ಹನ್ನೊಂದು 3-ಟೈರ್ ಎಸಿ ಕೋಚ್‌ಗಳು, ನಾಲ್ಕು 2-ಟೈರ್ ಎಸಿ ಕೋಚ್‌ಗಳು ಮತ್ತು ಒಂದು ಫಸ್ಟ್ಟೈರ್ ಎಸಿ ಕೋಚ್ ಇದೆ. 800 ರಿಂದ 1200 ಕಿಮೀ ದೂರವನ್ನು ಈ ರೈಲುಗಳು ಕ್ರಮಿಸಲಿವೆ. ರೈಲಿನಲ್ಲಿರುವ ಆಮ್ಲಜನಕದ ಮಟ್ಟವು ವೈರಸ್ ವಿರುದ್ಧ ರಕ್ಷಣೆ ನೀಡುತ್ತದೆ. ಕೋವಿಡ್‌ನಿಂದ ಪಾಠ ಕಲಿತಿದ್ದು, ಅಂತಹ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ ಎಂದು ರೈಲ್ವೆ ಮಂತ್ರಿ ತಿಳಿಸಿದರು.
ಮೂರು ಮಾದರಿಯಲ್ಲಿ ರೈಲುಗಳು:ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳು ಮೂರು ಆವೃತ್ತಿಗಳಲ್ಲಿ ಬರಲಿವೆ. ಇವು ಮಧ್ಯಮ ವರ್ಗದವರಿಗೆ ಮೀಸಲಾಗಿದ್ದು, ವಿವುಗಳ ಟಿಕೆಟ್ ದರ ರಾಜಧಾನಿ ಎಕ್ಸ್‌ಪ್ರೆಸ್ ಬೆಲೆಗೆ ಸಮನಾಗಿರುತ್ತದೆ. ಸೆಮಿ-ಹೈ ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ಚೇರ್‌ಕಾರ್ ರೈಲುಗಳು ಈಗಾಗಲೇ ದೇಶದ ವಿವಿಧ ನಗರಗಳ ನಡುವೆ ಓಡಾಡುತ್ತಿವೆ. ಶೀಘ್ರದಲ್ಲೇ ವಂದೇ ಮೆಟ್ರೋ ರೈಲನ್ನೂ ತರಲಾಗುವುದು. ದೂರದ ಪ್ರಯಾಣ ಮಾಡುವವರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಸ್ಲೀಪರ್ ಕೋಚ್ ರೈಲುಗಳನ್ನು ಮುಂದಿನ ಮೂರು ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಇದನ್ನೂ ಓದಿ:ವಂದೇ ಭಾರತ್ ಮೊದಲ ಸ್ಲೀಪರ್ ರೈಲು ಮಾರ್ಗ ಫೈನಲ್: ಈ ನಗರದಿಂದ ಮುಂಬೈಗೆ ಓಡಲು ತಯಾರಿ - VANDE BHARAT SLEEPER ROUTE FINAL