ಧೋಲ್ಪುರ್, ರಾಜಸ್ಥಾನ:ಒಂದು ವಾರಗಳ ವಿರಾಮದ ಬಳಿಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಶನಿವಾರ ಮಧ್ಯಾಹ್ನದಿಂದ ಪುನಾರಂಭಗೊಂಡಿದೆ. ಮಧ್ಯಾಹ್ನ ರಾಹುಲ್ ಗಾಂಧಿ ದೆಹಲಿಯಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ಧೋಲ್ಪುರ ತಲುಪಿದ ರಾಹುಲ್ ಗಾಂಧಿ ಯಾತ್ರೆಯನ್ನು ಆರಂಭಿಸಿದರು. ರಾಜಖೇಡ ಬೈಪಾಸ್ನಿಂದ ತೆರೆದ ವಾಹನದಲ್ಲಿ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ರೋಡ್ ಶೋ ಆರಂಭಿಸಿದರು. ರಾಹುಲ್ ಗಾಂಧಿ ಧೋಲ್ಪುರದಲ್ಲಿ ಸುಮಾರು 3 ಕಿಲೋಮೀಟರ್ ರೋಡ್ ಶೋ ನಡೆಸಿ, ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು. ದೋಲ್ಪುರದಿಂದ ಯಾತ್ರೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಗಡಿ ಪ್ರವೇಶಿಸಿದೆ.
ಕಾಂಗ್ರೆಸ್ ಹಿರಿಯ ನಾಯಕ ಮತ್ತು ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಪಾಲ್ಗೊಳ್ಳಲು ಶನಿವಾರ ಧೋಲ್ಪುರಕ್ಕೆ ತಲುಪಿದ್ದರು. ಈ ವೇಳೆ, ಅವರು ಅಲ್ಲಿನ ಸರ್ಕ್ಯೂಟ್ ಹೌಸ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಆದರೆ, ಮಧ್ಯಾಹ್ನದ ನಂತರ, ರಾಹುಲ್ ಗಾಂಧಿ ಅವರೊಂದಿಗೆ ಕಾಣಿಸಿಕೊಳ್ಳಲಿಲ್ಲ.
ಆದರೆ, ರಾಹುಲ್ ಗಾಂಧಿ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪಿಸಿಸಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋಟಸಾರಾ, ಸುಖವಿಂದರ್ ಸಿಂಗ್ ರಾಂಧವಾ, ರಾಜಖೇಡಾ ಶಾಸಕ ರೋಹಿತ್ ಬೋಹ್ರಾ, ಧೋಲ್ಪುರ ಶಾಸಕ ಶೋಭಾರಾಣಿ ಕುಶ್ವಾಹಾ ಮತ್ತು ಬಸೇರಿ ಶಾಸಕ ಸಂಜಯ್ ಜಾತವ್ ರೋಡ್ ಶೋನಲ್ಲಿ ಭಾಗಿಯಾದರು. ಸಚಿನ್ ಪೈಲಟ್ ಮೊರೆನಾಗೆ ತೆರಳಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಮೊರೆನಾದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯ ರೋಡ್ ಶೋ ನಡೆಯಲಿದೆ.