ತಿರುವನಂತಪುರಂ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಎರಡೂ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ರಾಯ್ ಬರೇಲಿ ಮತ್ತು ವಯನಾಡು ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿರುವ ಅವರು ಇದೀಗ ಒಂದು ಕ್ಷೇತ್ರವನ್ನು ಮಾತ್ರ ಉಳಿಸಿಕೊಳ್ಳಬಹುದಾಗಿದೆ. ಯಾವ ಕ್ಷೇತ್ರವನ್ನು ಅವರು ತೊರೆಯಲಿದ್ದಾರೆ ಎಂಬ ಕುತೂಹಲ ಕೇವಲ ಕಾಂಗ್ರೆಸ್ ನಾಯಕರಿಗೆ ಮಾತ್ರವಲ್ಲ, ಅವರ ರಾಜಕೀಯ ವಿರೋಧಿಗಳಲ್ಲೂ ಮೂಡಿದೆ. ಸಂವಿಧಾನ ತಜ್ಞರ ಪ್ರಕಾರ, ಫಲಿತಾಂಶ ಬಂದ 14 ದಿನಗಳೊಳಗೆ ಅವರು ಒಂದು ಕ್ಷೇತ್ರವನ್ನು ಮಾತ್ರ ಉಳಿಸಿಕೊಳ್ಳಬಹುದಾಗಿದೆ.
ಜೂನ್ 4ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಜೂನ್ 18ರೊಳಗೆ ಯಾವ ಕ್ಷೇತ್ರವನ್ನು ಆಯ್ಕೆ ಮಾಡಲಾಗುವುದು ಎಂಬ ಕುರಿತು ನಿರ್ಧರಿಸಬೇಕು. ಅವರು ಯಾವ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೋ ಅಲ್ಲಿ ಇನ್ನು ಆರು ತಿಂಗಳೊಳಗೆ ಉಪ ಚುನಾವಣೆ ನಡೆಯಲಿದ್ದು, ಹೊಸ ಸಂಸದರ ಆಯ್ಕೆ ಮಾಡಲಾಗುವುದು ಎಂದು ಮಾಜಿ ಲೋಕಸಭಾ ಕಾರ್ಯದರ್ಶಿ ಪಿಡಿಟಿ ಆಚಾರಿ ಈ ಟಿವಿ ಭಾರತ್ಗೆ ತಿಳಿಸಿದ್ದಾರೆ.