ಗುಮ್ಲಾ(ಜಾರ್ಖಂಡ್): ನಾಯಿಯು ಬಿಸ್ಕತ್ ತಿನ್ನಲು ನಿರಾಕರಿಸಿದ ನಂತರ ಅದಕ್ಕೆ ತಿನ್ನಿಸುವಂತೆ ಹೇಳಿ ಅದರ ಮಾಲೀಕನಿಗೆ ಬಿಸ್ಕತ್ ನೀಡಿದ್ದೆ ಎಂದು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಸ್ಪಷ್ಟನೆ ನೀಡಿದ್ದಾರೆ. ನಾಯಿ ತಿನ್ನದೆ ಬಿಟ್ಟ ಬಿಸ್ಕತ್ ಅನ್ನು ರಾಹುಲ್ ಗಾಂಧಿ ವ್ಯಕ್ತಿಯೊಬ್ಬನಿಗೆ ನೀಡುತ್ತಿರುವ ದೃಶ್ಯದ ವೀಡಿಯೊ ವೈರಲ್ ಆಗಿದೆ. ಆದರೆ ಈ ವೀಡಿಯೊ ನಂತರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷವು ತನ್ನ ಕಾರ್ಯಕರ್ತರನ್ನು ಇದೇ ರೀತಿ ನಡೆಸಿಕೊಳ್ಳುತ್ತದೆ ಎಂದು ಬಿಜೆಪಿ ಆರೋಪಿಸಿತ್ತು. ಹೀಗಾಗಿ ಈಗ ರಾಹುಲ್ ಗಾಂಧಿ ಈ ವೀಡಿಯೊ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
"ನಾಯಿ ಮೊದಲೇ ಹೆದರಿ ನಡುಗುತ್ತಿತ್ತು. ನಾನು ಅದಕ್ಕೆ ಬಿಸ್ಕತ್ ನೀಡಿದಾಗ ಅದು ಮತ್ತೂ ಹೆದರಿತು. ಆಗ ನಾನು ನಾಯಿ ಮಾಲೀಕನಿಗೆ ಬಿಸ್ಕತ್ ನೀಡಿ ನಿಮ್ಮ ಕೈಯಿಂದ ತಿನ್ನಿಸಿ ಎಂದು ಹೇಳಿದೆ. ಮಾಲೀಕ ಬಿಸ್ಕತ್ ನೀಡಿದಾಗ ಅದು ತಿಂದಿತು. ವಿಷಯ ಇಷ್ಟೇ. ಇದರಲ್ಲಿ ವಿವಾದವೇನಿದೆ?" ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ರಾಹುಲ್ ಹೇಳಿದರು. "ನಾಯಿಗಳ ವಿಚಾರದಲ್ಲಿ ಬಿಜೆಪಿಯವರಿಗೆ ಏಕೆ ಅಷ್ಟೊಂದು ವಿಶೇಷ ಆಸ್ಥೆ ಎಂಬುದು ಗೊತ್ತಾಗುತ್ತಿಲ್ಲ" ಎಂದು ರಾಹುಲ್ ಇದೇ ಸಮಯದಲ್ಲಿ ವ್ಯಂಗ್ಯವಾಡಿದರು.
ಈ ವೀಡಿಯೊ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ".... ರಾಹುಲ್ ಗಾಂಧಿ ಅಷ್ಟೇ ಏಕೆ, ಅವರ ಇಡೀ ಕುಟುಂಬ ಪ್ರಯತ್ನಿಸಿದರೂ ನಾನು ಆ ಬಿಸ್ಕತ್ ತಿನ್ನಲಾರೆ. ನಾನೊಬ್ಬ ಹೆಮ್ಮೆಯ ಅಸ್ಸಾಮಿಗ ಹಾಗೂ ಭಾರತೀಯನಾಗಿದ್ದೇನೆ. ಅಂಥ ಬಿಸ್ಕತ್ ತಿನ್ನಲು ನಿರಾಕರಿಸಿ ಪಕ್ಷಕ್ಕೆ ನಾನು ರಾಜೀನಾಮೆ ಕೊಟ್ಟಿದ್ದು" ಎಂದು ಹಿಮಂತಾ ಶರ್ಮಾ ಎಕ್ಸ್ನಲ್ಲಿ ಬರೆದಿದ್ದಾರೆ.