ಮಾಲ್ಡಾ (ಪಶ್ಚಿಮಬಂಗಾಳ) :ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಬಲವರ್ಧನೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಅವರ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದು ತೃಣಮೂಲ ಕಾಂಗ್ರೆಸ್ನ ಕೃತ್ಯ ಎಂದು ಕಾಂಗ್ರೆಸ್ ಆರೋಪಿಸಿದೆ.
ಯಾತ್ರೆಯು ಬುಧವಾರ ಪಶ್ಚಿಮಬಂಗಾಳದ ಮಾಲ್ಡಾ ಜಿಲ್ಲೆಗೆ ಪ್ರವೇಶಿಸಿದ ವೇಳೆ ಕಿಡಿಗೇಡಿಗಳು ರಾಹುಲ್ ಗಾಂಧಿ ಅವರಿದ್ದ ಕಾರಿನ ಮೇಲೆ ಕಲ್ಲು ತೂರಾಡಿದ್ದಾರೆ. ಇದರಿಂದ ಕಾರಿನ ಹಿಂಭಾಗದ ಕಿಟಕಿ ಗಾಜು ಪುಡಿಯಾಗಿದೆ. ರಾಹುಲ್ ಗಾಂಧಿ ಅವರನ್ನು ನೋಡಲು ಸಾವಿರಾರು ಜನರು ಘಟನಾ ಪ್ರದೇಶದಲ್ಲಿ ಜಮಾಯಿಸಿದ್ದರು.
ಟಿಎಂಸಿ ಕಾರ್ಯಕರ್ತರ ಕೈವಾಡ ಆರೋಪ:ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಪರೋಕ್ಷವಾಗಿ ಆರೋಪಿಸಿದರು. ಇದರ ಹಿಂದೆ ಯಾರಿದ್ದಾರೆ ಎಂಬುದು ನನಗೆ ತುಂಬಾ ಚೆನ್ನಾಗಿ ತಿಳಿದಿದೆ. ಇದು ಆಡಳಿತದ ದುರ್ಬಳಕೆ ಮತ್ತು ಸಂಕುಚಿತ ಮನೋಭಾವ ಎಂದು ಸರ್ಕಾರವನ್ನು ದೂಷಿಸಿದರು.
ರಾಜ್ಯದಲ್ಲಿ ಯಾತ್ರೆ ನಡೆಸಲು ಅನುಮತಿ ನೀಡಲಿಲ್ಲ. ನಾವು ಕಾರ್ಯಕರ್ತರ ಬಲದಿಂದ ರ್ಯಾಲಿಯನ್ನು ನಡೆಸುತ್ತಿದ್ದೇವೆ. ಇದಕ್ಕೆ ಮೇಲಿಂದ ಮೇಲೆ ಅಡ್ಡಿಯಾಗುತ್ತಲೇ ಇದೆ. ಇದು ಅಸಹಕಾರ ಮಾತ್ರವಲ್ಲದೇ, ಆಡಳಿತದ ದುರ್ಬಳಕೆಯನ್ನು ಸೂಚಿಸುತ್ತದೆ ಕಿಡಿಕಾರಿದರು.
ಸರ್ಕಾರದಿಂದ ಎಷ್ಟು ಸಾಧ್ಯವೋ ಅಷ್ಟು ವಿರೋಧ ವ್ಯಕ್ತವಾಗುತ್ತಿದೆ. ನಾವು ಕಾರಿನ ಒಳಗೆ ಕುಳಿತಿದ್ದ ಕಾರಣ, ಕಲ್ಲು ತೂರಾಟ ಮಾಡಿದವರು ಯಾರೆಂದು ಗೊತ್ತಾಗಲಿಲ್ಲ. ಕಾಂಗ್ರೆಸ್ ಯಾರನ್ನೂ ವಿರೋಧ ಮಾಡುವುದಿಲ್ಲ. ರಾಹುಲ್ ಗಾಂಧಿ ಅವರ ಪ್ರತಿ ಹೆಜ್ಜೆಗೂ ಅಡ್ಡಿ ಉಂಟು ಮಾಡುತ್ತಿರುವುದಕ್ಕೆ ನನ್ನ ವಿರೋಧವಿದೆ ಎಂದು ಚೌಧರಿ ಕಿಡಿಕಾರಿದರು.
ಯಾತ್ರೆಗೆ ಟಿಎಂಸಿ ಕಾರ್ಯಕರ್ತರ ವಿರೋಧ:ಇದಕ್ಕೂ ಮೊದಲು, ಜನವರಿ 25 ರಂದು ರಾಹುಲ್ ಯಾತ್ರೆಯು ಅಸ್ಸೋಂನಿಂದ ಪಶ್ಚಿಮಬಂಗಾಳ ಪ್ರವೇಶಿಸಿದಾಗ ಟಿಎಂಸಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ರಾಹುಲ್, ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಕಾಂಗ್ರೆಸ್ ಮತ್ತು ಸಿಎಂ ಮಮತಾ ಅವರು ಒಂದೇ ನಗರದಲ್ಲಿದ್ದರೂ, ಪರಸ್ಪರ ಭೇಟಿಯಾಗಿರಲಿಲ್ಲ. ಇಬ್ಬರೂ ಇಂಡಿಯಾ ಕೂಟದ ಭಾಗವಾಗಿದ್ದರೂ, ಯಾತ್ರೆಗೆ ಬೆಂಬಲ ನೀಡದೇ ಇರುವುದು ಕಾಂಗ್ರೆಸ್ ಅಸಮಾಧಾನಕ್ಕೆ ಕಾರಣವಾಗಿದೆ. ಟಿಎಂಸಿ ಕಾರ್ಯಕರ್ತರ ಘೋಷಣೆಯ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಕಾಂಗ್ರೆಸ್ ಆಕ್ಷೇಪಣಾ ಪತ್ರ ಬರೆದಿದೆ.
ಇದನ್ನೂ ಓದಿ:ಆರೆಸ್ಸೆಸ್, ಬಿಜೆಪಿ ಸಿದ್ಧಾಂತಗಳಿಂದ ದೇಶದಲ್ಲಿ ದ್ವೇಷ ಮತ್ತು ಹಿಂಸೆ: ರಾಹುಲ್ ಗಾಂಧಿ ಆರೋಪ