ಫರುಖಾಬಾದ್: ಬಿಜೆಪಿ ಸರ್ಕಾರದ ಅಡಿ ನ್ಯಾಯ ನಿರೀಕ್ಷಿಸುವುದು ಅಪರಾಧ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟೀಕಿಸಿದ್ದಾರೆ. ಉತ್ತರ ಪ್ರದೇಶದ ಫತೇಗಢ್ನಲ್ಲಿ ದಲಿತ ಬಾಲಕಿಯರಿಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಖಂಡಿಸಿ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಘಟನೆ ಸಂಬಂಧ ಎಕ್ಸ್ಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅಖಿಲೇಶ್ ಯಾದವ್, 'ಘಟನೆ ಕುರಿತು ಯೋಗಿ ಸರ್ಕಾರ ಮೌನವಹಿಸಿದೆ. ಫರೂಖಾಬಾದ್ನಲ್ಲಿ ಇಬ್ಬರು ದಲಿತ ಬಾಲಕಿಯರ ಅನುಮಾನಾಸ್ಪದ ಸಾವು ಕುರಿತು ಬಿಜೆಪಿ ಸರ್ಕಾರ ಮೌನವಹಿಸಿದೆ. ಇದಕ್ಕೆ ಎರಡು ಕಾರಣವಿರಬಹುದು. ಒಂದು ಬಿಜೆಪಿ ಮಹಿಳಾ ವಿರೋಧಿ ಆಲೋಚನೆ ಹಾಗೂ ವರ್ತನೆ ಮತ್ತು ಇನ್ನೊಂದು ಕಾರಣ ಮೃತರು ದಲಿತರಾಗಿರುವುದು. ಅಲ್ಲದೇ ಘಟನೆ ಕುರಿತು ಸಂತಾಪ ಮತ್ತು ಧ್ವನಿ ಎತ್ತಲು ಸಮಾಜವಾದಿ ಪಕ್ಷದಿಂದ ಅಲ್ಲಿಗೆ ನಿಯೋಗ ಕಳುಹಿಸುವುದಾಗಿ ತಿಳಿಸಿದ್ದಾರೆ.
ಇದೇ ಘಟನೆ ಕುರಿತು ರಾಹುಲ್ ಗಾಂಧಿ ಕೂಡ ಆತಂಕ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 'ಬಿಜೆಪಿ ಸರ್ಕಾರದ ಅಡಿ ನ್ಯಾಯ ನಿರೀಕ್ಷಿಸುವುದು ಅಪರಾಧವಾಗಿದೆ. ನ್ಯಾಯ ಆದ್ಯತೆ ಅಲ್ಲ ಎಂದು ಭಾವಿಸಿದವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ. ದುರ್ಬಲ ಮತ್ತು ವಂಚಿತರ ವಿರುದ್ಧದ ಬಹುತೇಕ ಗಂಭೀರ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯೋಗಿ ಸರ್ಕಾರ ಪತನವಾಗುತ್ತಿದೆ. ಜನರಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಯಾವುದೆ ಆಶಾಭಾವನೆ ಉಳಿದಿಲ್ಲ. ಬಿಜೆಪಿ ಯಾವಾಗಲೇ ಮಹಿಳೆಯರ ವಿಷಯಕ್ಕೆ ದನಿಯಾದರೆ ಅಲ್ಲಿ ಕೇವಲ ರಾಜಕೀಯವಿರುತ್ತದೆ. ಇದೇ ಕಾರಣಕ್ಕೆ ಬಿಜೆಪಿ ವಿರೋಧಿ ರಾಜ್ಯದಲ್ಲಿ ಮಾತ್ರ ಬಿಜೆಪಿ ಮಹಿಳಾ ವಿಚಾರದಲ್ಲಿ ಧ್ವನಿ ಎತ್ತುತ್ತಿದೆ. ಆದರೆ, ಬಿಜೆಪಿ ಆಡಳಿತ ರಾಜ್ಯದಲ್ಲಿ ಅದು ಬಾಯಿ, ಕಣ್ಣು , ಕಿವಿ ಹಾಗೂ ಪ್ರಕರಣದ ಎಲ್ಲಾ ನೈತಿಕತೆಯನ್ನು ಬಂದ್ ಮಾಡುತ್ತದೆ ಎಂದು ಅಖಿಲೇಶ್ ಯಾದವ್ ಪೋಸ್ಟ್ ಮಾಡಿದ್ದಾರೆ.