ಚಂಡೀಗಢ: ದೆಹಲಿಯತ್ತ ಕಾಲ್ನಡಿಗೆಗೆ ಮುಂದಾಗಿದ್ದ ರೈತರ ಮೆರವಣಿಗೆ ಶಂಭು ಗಡಿ ದಾಟಲು ಯತ್ನಿಸಿದಾಗ ಅವರ ಮೇಲೆ ಹರಿಯಾಣ ಪೊಲೀಸರು ಆಶ್ರವಾಯು ಪ್ರಯೋಗಿಸಿದ್ದಾರೆ.
101 ರೈತರ ಗುಂಪು ಕಾಲ್ನಡಿಗೆ ಜಾಥವು ದೆಹಲಿಯತ್ತ ಇಂದು ಸಾಗಿತು. ಈ ಹಿನ್ನೆಲೆ ಶಂಭು ಗಡಿ ಬಳಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮಧ್ಯಾಹ್ನ 12ರ ಸುಮಾರಿಗೆ ಪಂಜಾಬ್ ಹರಿಯಾಣ ಗಡಿ ಶಂಭು ಬಳಿ ಪ್ರತಿಭಟನಾಕಾರರು ಮುನ್ನುಗ್ಗಲು ಪ್ರಯತ್ನಿಸಿದರು. ಅವರನ್ನು ನಿಯಂತ್ರಿಸಲು ಹಾಕಿದ್ದ ಬ್ಯಾರಿಕೇಡ್ ಸಮೀಪಿಸುತ್ತಿದ್ದಂತೆ ಪೊಲೀಸರು ರೈತರನ್ನು ತಡೆಯಲು ಮುಂದಾದರು.
ಆಶ್ರುವಾಯು ಪ್ರಯೋಗದಿಂದ ಗಾಯಗೊಂಡ ರೈತರನ್ನು ಪ್ರತಿಭಟನಾ ಸ್ಥಳದಲ್ಲಿದ್ದ ಅಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.
ಇದಕ್ಕೂ ಮೊದಲು, ಅಂಬಾಲಾ ಡೆಪ್ಯುಟಿ ಕಮಿಷನರ್ ಪಾರ್ಥ್ ಗುಪ್ತಾ ಮತ್ತು ಅಂಬಾಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಎಸ್ ಭೋರಿಯಾ ಅವರು ಪ್ರತಿಭಟನಾನಿರತ ರೈತರೊಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ರಾಷ್ಟ್ರ ರಾಜಧಾನಿ ಕಡೆಗೆ ಹೋಗಲು ದೆಹಲಿಯಿಂದ ಅನುಮತಿ ಪಡೆಯಲು ಮನವೊಲಿಸಲು ಪ್ರಯತ್ನಿಸಿದರು. ಆದಾಗ್ಯೂ ರೈತರು ಇದನ್ನು ನಿರಾಕರಿಸಿ, ದೆಹಲಿಯತ್ತ ತಮ್ಮನ್ನು ಹೋಗಲು ಬಿಡುವಂತೆ ಭದ್ರತಾ ಸಿಬ್ಬಂದಿಗಳಿಗೆ ಒತ್ತಾಯಿಸಿದರು. ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ, ರೈತರ ಗುಂಪನ್ನು ಹರಿಯಾಣ ಪೊಲೀಸರು ಬ್ಯಾರಿಕೇಡ್ ಬಳಿ ತಡೆದು ಮುಂದೆ ಪ್ರಯಾಣಿಸಲು ಅವಕಾಶವಿಲ್ಲ ಎಂದು ತಿಳಿಸಿದರು.