ಬೆಳಗಾವಿ: ಬೆಳಗಾವಿಯ ಅನಗೋಳದ ಧರ್ಮವೀರ ಸಂಭಾಜಿ ವೃತ್ತದಲ್ಲಿ ನಿರ್ಮಿಸಿರುವ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಭಾನುವಾರ ಅನಧಿಕೃತವಾಗಿ ಅನಾವರಣವಾಗಿದೆ. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಒಂದು ಕಾರ್ಯಕ್ರಮ ಮಾಡಿ ಪ್ರತಿಮೆಯನ್ನು ಉದ್ಘಾಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಮಾಹಿತಿ ನೀಡಿದರು.
ಜಿಲ್ಲಾಡಳಿತದ ವಿರೋಧದ ನಡುವೆಯೂ ನಿನ್ನೆ ಶಾಸಕ ಅಭಯ್ ಪಾಟೀಲ ನೇತೃತ್ವದಲ್ಲಿ ಅದ್ಧೂರಿಯಾಗಿ ಶೋಭಾಯಾತ್ರೆ ನಡೆಸುವ ಮೂಲಕ ಸಂಭಾಜಿ ಮಹಾರಾಜರ ಮೂರ್ತಿಯನ್ನು ಅನಾರವಣಗೊಳಿಸಲಾಗಿತ್ತು. ಈ ವೇಳೆ ಶಿವಾಜಿ ಮಹಾರಾಜರ 13ನೇ ವಂಶಸ್ಥರೂ ಆಗಿರುವ ಮಹಾರಾಷ್ಟ್ರ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವ ಶಿವೇಂದ್ರರಾಜೆ ಭೋಸ್ಲೆ ಕೂಡ ಉಪಸ್ಥಿತರಿದ್ದರು.
ಈ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿಗಳು, ನಿನ್ನೆ ಆಗಿರುವ ಕಾರ್ಯಕ್ರಮ ಅನಧಿಕೃತವಾಗಿದೆ. ಎರಡು ವರ್ಷಗಳ ಹಿಂದೆ ಒಂದು ಠರಾವು ಪಾಸ್ ಮಾಡಿ ಪುತ್ಥಳಿ ಅನಾವರಣ ಮಾಡಬೇಕೆಂದು ಕೇಳಿದ್ದರು. ಸರ್ಕಾರಕ್ಕೂ ಕೂಡಾ ಒಂದು ವರದಿ ಹೋಗಿದೆ. ಸುಪ್ರೀಂ ಕೋರ್ಟ್ ಪ್ರಕಾರ ಜಿಲ್ಲಾಧಿಕಾರಿ ಅವರಿಂದ ಒಂದು ವರದಿ ಇರಬೇಕು ಅಂತಾ ಇದೆ. ಸರ್ಕಲ್ನಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗಬಾರದು ಎಂದು ಸರ್ಕಾರದಿಂದ ತಿರಸ್ಕಾರ ಆಗಿ ಒಂದು ಪತ್ರ ಬಂದಿದೆ ಎಂದರು.
ಮೊನ್ನೆ ನಾನು ಸಭೆ ನಡೆಸಿದ ಬಳಿಕ ಸಮಯ ಕೇಳಿದ್ದೆ. ಆದರೆ, ನಿನ್ನೆ ಅನಧಿಕೃತವಾಗಿ ಕಾರ್ಯಕ್ರಮ ನಡೆಸಿದ್ದಾರೆ. ಎಲ್ಲಾ ಪಕ್ಷದವರು, ಎಲ್ಲಾ ಧರ್ಮದವರು ಸಂಭಾಜಿ ಮಹಾರಾಜರ ಪುತ್ಥಳಿ ಅನಾವರಣ ಕಾರ್ಯಕ್ರಮ ಅದ್ಧೂರಿ ಆಚರಣೆಗೆ ಉತ್ಸುಕರಾಗಿದ್ದರು. ಕೆಲಸ ಅಪೂರ್ಣ ಆಗಿದೆ. ಪುತ್ಥಳಿ ಉದ್ಘಾಟನೆ ಮಾಡುವುದು ಬೇಡ ಎಂದು ಹೇಳಿದ್ದರು. ಹಾಗಾಗಿ, ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಒಂದು ಕಾರ್ಯಕ್ರಮ ಮಾಡಲಾಗುತ್ತದೆ ಎಂದು ತಿಳಿಸಿದರು.
ನಾನು ಹಾಗೂ ಪೊಲೀಸ್ ಕಮಿಷನರ್ ಮೊನ್ನೆ ರಾತ್ರಿ ಸಂಭಾಜಿ ಮಹಾರಾಜರ ಪುತ್ಥಳಿ ಇರುವ ಸ್ಥಳಕ್ಕೆ ಹೋಗಿ ಭೇಟಿ ಮಾಡಿ ಸ್ಥಳೀಯರ ಜೊತೆಗೆ ಚರ್ಚಿಸಿದ್ದೆವು. ಸ್ಥಳದಲ್ಲಿ ಮುಖಂಡರು ಹಾಗೂ ಗ್ರಾಮಸ್ಥರು ಬಂದಿದ್ದರು. ಸಂಭಾಜಿ ಮಹಾರಾಜರ ಪ್ರತಿಮೆ ಉದ್ಘಾಟನೆ ಶಿಷ್ಟಾಚಾರ ಪ್ರಕಾರ ನಡೆಯಬೇಕೆಂದು ಮನವಿ ಮಾಡಿದ್ದರು. ಹಾಗಾಗಿ, ಸಂಭಾಜಿ ಮಹಾರಾಜರಿಗೆ ಗೌರವ ತರುವ ರೀತಿಯಲ್ಲಿ ಅದ್ಧೂರಿಯಾಗಿ, ಅಧಿಕೃತವಾಗಿ ಕಾರ್ಯಕ್ರಮ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಭಾನುವಾರ ರಾತ್ರಿ ಅನಾವರಣ : ಜಿಲ್ಲಾಡಳಿತ ಅನುಮತಿ ನೀಡದಿದ್ದರೂ ಶೋಭಾಯಾತ್ರೆ ನಡೆಸಿ ಬೆಳಗಾವಿಯ ಅನಗೋಳದ ಸಂಭಾಜಿ ವೃತ್ತದಲ್ಲಿ 21 ಅಡಿ ಎತ್ತರದ ಸಂಭಾಜಿ ಮಹಾರಾಜರ ಪ್ರತಿಮೆಯನ್ನು ಭಾನುವಾರ ಅನಾವರಣಗೊಳಿಸಲಾಗಿದೆ.
ಇದನ್ನೂ ಓದಿ: ಬೆಳಗಾವಿ ಜಿಲ್ಲಾಡಳಿತದ ವಿರೋಧ ನಡುವೆಯೂ ಸಂಭಾಜಿ ಮಹಾರಾಜ ಪ್ರತಿಮೆ ಅನಾವರಣ: ಬೃಹತ್ ಶೋಭಾಯಾತ್ರೆ