ಕರ್ನಾಟಕ

karnataka

ETV Bharat / bharat

ಕನಿಷ್ಠ ಬೆಂಬಲ ಬೆಲೆ ಕಾನೂನಿಗೆ ಆಗ್ರಹಿಸಿ ಡಿ.6 ರಿಂದ ಪಂಜಾಬ್ ರೈತರ ದೆಹಲಿ ಚಲೋ - DELHI CHALO

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್​ಪಿ) ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ದಿಲ್ಲಿಗೆ ಕಾಲ್ನಡಿಗೆ ಜಾಥಾ ನಡೆಸುವುದಾಗಿ ರೈತರು ಹೇಳಿದ್ದಾರೆ.

ಧರಣಿ ನಿರತ ರೈತರು
ಧರಣಿ ನಿರತ ರೈತರು (IANS)

By ETV Bharat Karnataka Team

Published : Nov 18, 2024, 7:53 PM IST

ಚಂಡೀಗಢ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್​ಪಿ) ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಡಿ.6ರಂದು ದಿಲ್ಲಿಗೆ ಕಾಲ್ನಡಿಗೆ ಜಾಥಾ ಆರಂಭಿಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೋಮವಾರ ಘೋಷಿಸಿವೆ. ಅಲ್ಲದೇ ಮತ್ತೊಬ್ಬ ರೈತ ಮುಖಂಡ ಜಗಜಿತ್ ಸಿಂಗ್ ದಲೇವಾಲ್ ಅವರು ನವೆಂಬರ್ 26 ರಿಂದ ಪಂಜಾಬ್ ಮತ್ತು ಹರಿಯಾಣ ಗಡಿಯ ಖನೌರಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಸರ್ವನ್ ಸಿಂಗ್ ಪಂಧೇರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಫೆಬ್ರವರಿ 13 ಮತ್ತು ಫೆಬ್ರವರಿ 21 ರಂದು ರೈತರ ತಂಡಗಳು ದೆಹಲಿಯನ್ನು ತಲುಪುವ ಎರಡು ಪ್ರಯತ್ನಗಳನ್ನು ಪೊಲೀಸರು ತಡೆದಿದ್ದರು. ಅದರ ನಂತರ ರಾಷ್ಟ್ರ ರಾಜಧಾನಿಯತ್ತ ಮತ್ತೆ ಜಾಥಾ ನಡೆಸುವುದಾಗಿ ರೈತ ಸಂಘಟನೆಗಳು ಘೋಷಿಸಿವೆ.

"ರೈತರು ಫೆಬ್ರವರಿ 13 ರಿಂದ ಶಂಭು ಮತ್ತು ಖನೌರಿ ಗಡಿಯಲ್ಲಿ ಧರಣಿ ನಡೆಸುತ್ತಿದ್ದಾರೆ. ಸರ್ಕಾರದೊಂದಿಗೆ ಈ ಹಿಂದೆ ಫೆಬ್ರವರಿ 18 ರಂದು ನಡೆದ ಸಭೆ ಅಪೂರ್ಣವಾಗಿದೆ" ಎಂದು ಪಂಧೇರ್ ಹೇಳಿದರು. ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

"ರೈತರ ಕಲ್ಯಾಣದ ಬಗ್ಗೆ ಚಿಂತಿತರಾಗಿದ್ದೇವೆ ಎಂದು ಅವರು ಬರೀ ಬಾಯಿ ಮಾತಿನಲ್ಲಿ ಹೇಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಅವರು ನಮ್ಮ ಬಗ್ಗೆ ಒಂದಿಷ್ಟೂ ತಲೆಕೆಡಿಸಿಕೊಳ್ಳುತ್ತಿಲ್ಲ. ಫೆಬ್ರವರಿ ಮಧ್ಯದಿಂದ ಶಂಭು ಮತ್ತು ಖನೌರಿಯಲ್ಲಿ ನಡೆಯುತ್ತಿರುವ ಧರಣಿಗಳಲ್ಲಿ ಸುಮಾರು 30 ರೈತರು ಸಾವನ್ನಪ್ಪಿದ್ದಾರೆ. ಅಲ್ಲದೇ ರೈತರು ಖನೌರಿಯಲ್ಲಿ ಗಡಿ ದಾಟಲು ಪ್ರಯತ್ನಿಸುತ್ತಿದ್ದಾಗ ಹರಿಯಾಣ ಕಡೆಯಿಂದ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಿಂದಾಗಿ ಶುಭಕರನ್ ಸಿಂಗ್ ಸಾವನ್ನಪ್ಪಿದ್ದಾರೆ" ಎಂದು ಅವರು ಹೇಳಿದರು.

"ನಾವು ನಮ್ಮ ಹಿರಿಯ ನಾಯಕರ ನೇತೃತ್ವದಲ್ಲಿ ಗುಂಪುಗಳಾಗಿ ದೆಹಲಿಯತ್ತ ಸಾಗಲಿದ್ದೇವೆ. ಈ ಬಾರಿ ಟ್ರ್ಯಾಕ್ಟರ್​ ಟ್ರಾಲಿಗಳನ್ನು ರೈತರು ತರುತ್ತಿಲ್ಲ. ಆದರೆ ಈ ಬಾರಿ ನಾವು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಸ್ಥಳವನ್ನು ಬಯಸುತ್ತೇವೆ" ಎಂದು ಅವರು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮತ್ತೊಬ್ಬ ರೈತ ಮುಖಂಡ ಗುರಮ್ನೀತ್ ಮಂಗತ್, "ಶಂಭು ಗಡಿಯಲ್ಲಿ ಬಹು ಹಂತದಲ್ಲಿ ಬ್ಯಾರಿಕೇಡ್​ಗಳನ್ನು ಹಾಕಿರುವುದರಿಂದ ಈ ಬಾರಿ ನಾವು ಕಾಲ್ನಡಿಗೆಯಲ್ಲಿ ಗುಂಪುಗಳಾಗಿ ಹೋಗುತ್ತೇವೆ. ನಾವು ಕಾಲ್ನಡಿಗೆಯಲ್ಲಿ ದೆಹಲಿಗೆ ಹೋಗಲು ಅವಕಾಶವಿದೆ ಎಂದು ಹರಿಯಾಣ ಸರ್ಕಾರ ಮತ್ತು ಕೇಂದ್ರವು ಹಲವಾರು ಬಾರಿ ಹೇಳಿವೆ." ಎಂದರು.

ಇದನ್ನೂ ಓದಿ: ರಿಯಲ್ ಎಸ್ಟೇಟ್ ಪ್ರಕರಣ: ಕ್ರಿಕೆಟಿಗ ಗೌತಮ್ ಗಂಭೀರ್​ಗೆ ದೆಹಲಿ ಹೈಕೋರ್ಟ್​ನಿಂದ ರಿಲೀಫ್

ABOUT THE AUTHOR

...view details