ಚಂಡೀಗಢ:ಪ್ರಸ್ತುತ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡವನ್ನು ಬೆಂಬಲಿಸಲು ಪ್ಯಾರಿಸ್‌ಗೆ ಭೇಟಿ ನೀಡಲು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕೋರಿದ್ದ ಅನುಮತಿಯನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ಭದ್ರತಾ ಕಾರಣಗಳಿಗಾಗಿ ಪ್ಯಾರಿಸ್ ಪ್ರವಾಸಕ್ಕೆ ರಾಜತಾಂತ್ರಿಕ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ರಾಜತಾಂತ್ರಿಕ ಪಾಸ್ಪೋರ್ಟ್ ಹೊಂದಿರುವ ಪಂಜಾಬ್ ಸಿಎಂ ಮಾನ್ ಅವರು ಆಗಸ್ಟ್ 3 ರಿಂದ 9 ರವರೆಗೆ ಪ್ಯಾರಿಸ್‌ಗೆ ತೆರಳಲು ಮುಂದಾಗಿದ್ದರು. ಆಗಸ್ಟ್ 4 ರಂದು ಭಾರತ ಹಾಕಿ ತಂಡದ ಕ್ವಾರ್ಟರ್‌ಫೈನಲ್ ಪಂದ್ಯವಿದ್ದು, ಅದನ್ನು ವೀಕ್ಷಿಸಲು ಬಯಸಿದ್ದರು. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಅನುಮತಿ ಕೋರಿದ್ದರು.
ಸಿಎಂ ಮಾನ್ ಅವರು ಝಡ್ ಪ್ಲಸ್ ಭದ್ರತೆಯಲ್ಲಿರುವ ಕಾರಣ, ಕಡಿಮೆ ಸಮಯದಲ್ಲಿ ಇದನ್ನು ಹೊಂದಿಸಲು ಸಾಧ್ಯವಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಕಚೇರಿಗೆ ಕೇಂದ್ರ ಸರ್ಕಾರ ತಿಳಿಸಿದೆ. ಇದನ್ನು ಸಿಎಂ ಕಚೇರಿ ಕೂಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ನಾಯಕರ ವಿದೇಶ ಪ್ರವಾಸಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ರಾಜಕೀಯ ಅನುಮತಿ ಅಗತ್ಯವಿದೆ. ಕೇಂದ್ರ ಸರ್ಕಾರದಿಂದ ಮಾನ್ ಅವರ ಪ್ಯಾರಿಸ್ ಭೇಟಿಗೆ ಅನುಮತಿ ನೀಡಿಲ್ಲ ಎಂದು ಹೇಳಿದೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತೀಯ ಪುರುಷರ ಹಾಕಿ ತಂಡದ ನಾಯಕ ಪಂಜಾಬ್‌ನ ಹರ್ಮನ್‌ಪ್ರೀತ್ ಸಿಂಗ್ ಅವರು 2 ಗೋಲು ಬಾರಿಸಿ ಜಯ ತಂದಿದ್ದರು. ಬಳಿಕ ಫೋನ್ ಕರೆ ಮಾಡಿದ್ದ ಮಾನ್, ಐತಿಹಾಸಿಕ ಗೆಲುವಿಗಾಗಿ ತಂಡವನ್ನು ಅಭಿನಂದಿಸಿದ್ದರು. ಜೊತೆಗೆ ಆಗಸ್ಟ್ 4 ರಂದು ನಡೆಯಲಿರುವ ಕ್ವಾರ್ಟರ್‌ಫೈನಲ್ ಪಂದ್ಯದ ವೀಕ್ಷಣೆಗೆ ಪ್ಯಾರಿಸ್‌ಗೆ ಬರುವುದಾಗಿ ಭರವಸೆ ನೀಡಿದ್ದರು.