ಪುಣೆ (ಮಹರಾಷ್ಟ್ರ): ಐಷಾರಾಮಿ ಪೋರ್ಷೆ ಕಾರು ಚಲಾಯಿಸಿ, ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಇಬ್ಬರ ಸಾವಿಗೆ ಕಾರಣಾದ ಪ್ರಕರಣದಲ್ಲಿ ಪುಣೆ ಪೊಲೀಸರು ಅಪ್ರಾಪ್ತನ ತಂದೆಯನ್ನು ವಶಕ್ಕೆ ಪಡೆದಿದ್ದಾರೆ.
17 ವರ್ಷದ ಅಪ್ತಾಪ್ತ ಬಾಲಕ ಮೇ 19ರಂದು ಐಷಾರಾಮಿ ಕಾರು ಚಲಾಯಿಸುತ್ತಿದ್ದ. ಪೊಲೀಸರ ಪ್ರಕಾರ, ಅಪ್ರಾಪ್ತ ಬಾರ್ನಲ್ಲಿ ಮದ್ಯ ಸೇವಿಸಿ, ಕಾರು ಚಲಾಯಿಸುತ್ತಿದ್ದ. ಈ ವೇಳೆ ನಶೆಯಲ್ಲಿ ಆತ ಕಲ್ಯಾಣಿ ನಗರ ಪ್ರದೇಶದಲ್ಲಿ ಇಬ್ಬರು ಮೋಟಾರ್ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಅವರ ಸಾವಿಗೆ ಕಾರಣವಾಗಿದ್ದ. ಈ ಪ್ರಕರಣದಲ್ಲಿ ಅಪ್ರಾಪ್ತನ ತಂದೆಯನ್ನು ಛತ್ರಪತಿ ಸಂಭಾಜಿನಗರದಿಂದ ಪುಣೆಗೆ ಕರೆ ತರಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.
ಅಪ್ರಾಪ್ತ ಬಾಲಕನ ತಂದೆ ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದಾರೆ. ಆತನ ವಿರುದ್ಧ ಬಾಲ ನ್ಯಾಯ ಕಾಯ್ದೆ ಸೆಕ್ಷನ್ 75 ಮತ್ತು 77ರ ಅಡಿ ಪ್ರಕರಣ ದಾಖಲಿಸಲಾಗಿದೆ. ಆತನಿಗೆ ಮದ್ಯ ಪೊರೈಕೆ ಮಾಡಿದ ಬಾರ್ ಮಾಲೀಕ ಮತ್ತು ಸಿಬ್ಬಂದಿಗಳ ವಿರುದ್ಧ ಕೂಡ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣವನ್ನು ಕ್ರೈಮ್ ಬ್ರಾಂಚ್ಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆಕ್ಷನ್ 75 ಮಕ್ಕಳ ನಿರ್ಲಕ್ಷ್ಯ ಅಥವಾ ಮಾನಸಿಕ ಅಥವಾ ದೈಹಿಕ ಅಸ್ವಸ್ಥತೆಗೆ ಮಕ್ಕಳನ್ನು ಒಡ್ಡುವಿಕೆ ಕುರಿತು ತಿಳಿಸಿದರೆ, ಸೆಕ್ಷನ್ 77 ಮಕ್ಕಳ ಅಮಲೇರಿಸುವ ಮದ್ಯ ಅಥವಾ ಮಾದಕ ದ್ರವ್ಯಗಳನ್ನು ಪೂರೈಸುವುದರ ಕುರಿತು ತಿಳಿಸುತ್ತದೆ.
ದಾಖಲಾಗಿರುವ ಎಫ್ಐಆರ್ ಪ್ರಕಾರ, ಮಗ ಅಪ್ರಾಪ್ತನಾಗಿದ್ದು, ಆತನ ಬಳಿ ಚಾಲನ ಪರವಾನಿಗೆ (ಲೈಸೆನ್ಸ್) ಇಲ್ಲ ಎಂಬುದು ತಿಳಿದರೂ ಆತನಿಗೆ ಕಾರು ನೀಡಿರುವುದು. ಆತನ ಜೀವಕ್ಕೆ ಅಪಾಯ ಉಂಟು ಮಾಡುತ್ತದೆ. ಹಾಗೇ ಆತ ಮದ್ಯ ಸೇವಿಸುತ್ತಾನೆ ಎಂದು ಆತನಿಗೆ ಪಾರ್ಟಿ ಮಾಡಲು ಅವಕಾಶ ನೀಡಿದ ಸಂಬಂಧ ತಂದೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.