ಮುಂಬೈ (ಮಹಾರಾಷ್ಟ್ರ):ಅಧಿಕಾರ ದುರ್ಬಳಕೆ ಮಾಡಿಕೊಂಡ ವಿವಾದಿತ ಟ್ರೇನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ಗೆ ದೊಡ್ಡ ಹೊಡೆತ ಬಿದ್ದಿದೆ. ನೇಮಕಾತಿ ವೇಳೆ ಸುಳ್ಳು ಮಾಹಿತಿ ನೀಡಿದ ಆರೋಪದ ಹಿನ್ನೆಲೆ ಅವರನ್ನು ತಕ್ಷಣದಿಂದಲೇ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಮಸ್ಸೂರಿಯಲ್ಲಿರುವ ಐಎಎಸ್ ಅಕಾಡೆಮಿ ಎದುರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಪುಣೆಯಲ್ಲಿ ನಿಯೋಜಿತವಾಗಿದ್ದ ಪೂಜಾ ಅವರನ್ನು ವಿವಾದದ ಬಳಿಕ ಇನ್ನೊಂದೆಡೆ ವರ್ಗ ಮಾಡಲಾಗಿತ್ತು. ಇದೀಗ ಯುಪಿಎಸ್ಸಿ ನೇಮಕಾತಿಯಲ್ಲಿ ನಕಲಿ ದಾಖಲೆಗಳು ನೀಡಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರೊಬೇಷನರಿ ಅಧಿಕಾರಿ ಹುದ್ದೆಯಿಂದಲೂ ಕೈಬಿಡಲಾಗಿದೆ.
ಈ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ನಿತಿನ್ ಗಾದ್ರೆ ಅವರು ಪೂಜಾ ಖೇಡ್ಕರ್ ಅವರಿಗೆ ಪತ್ರ ಬರೆದು, ಜುಲೈ 23 ರೊಳಗೆ ಅಕಾಡೆಮಿ ಮುಂದೆ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದ್ದಾರೆ. ವಿವಾದ ಸೃಷ್ಟಿಯಾದ ಬಳಿಕ ವಿಚಾರಣೆಗಾಗಿ ಏಕಸದಸ್ಯ ಸಮಿತಿಯನ್ನು ರಚಿಸಲಾಗಿದೆ.
ಏನಿದು ವಿವಾದ:ಟ್ರೇನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್, ತಮ್ಮ ವೈಯಕ್ತಿಕ ಕಾರಿನ ಮೇಲೆ 'ಮಹಾರಾಷ್ಟ್ರ ಸರ್ಕಾರ' ಎಂದು ಅನಧಿಕೃತವಾಗಿ ಬರೆದುಕೊಂಡಿದ್ದಲ್ಲದೇ, ಕೆಂಪು ದ್ವೀಪವನ್ನು ಅಳವಡಿಸಿಕೊಂಡಿದ್ದರು. ಜೊತೆಗೆ ಅಧಿಕಾರಿಯೊಬ್ಬರ ಕಚೇರಿಯನ್ನು ಅಕ್ರಮವಾಗಿ ತಮ್ಮ ವಶದಲ್ಲಿರಿಸಿಕೊಂಡಿದ್ದರು. ಕಚೇರಿಗೆ ದುಬಾರಿ ವಸ್ತುಗಳನ್ನು ಅಳಡಿಸಿದ್ದರು.