ಕರ್ನಾಟಕ

karnataka

ETV Bharat / bharat

ಜುಲೈನಲ್ಲಿ ಭರವಸೆ ಮೂಡಿಸಿದ ಮುಂಗಾರು: ದೇಶದಲ್ಲಿ ಕಳೆದ ಬಾರಿಗಿಂತ ಹೆಚ್ಚು ಬಿತ್ತನೆ - July Monsoon

ಜುಲೈ ಆರಂಭದಲ್ಲಿ ಮುಂಗಾರು ಮಳೆ ದೇಶಾದ್ಯಂತ ಸುರಿಯುತ್ತಿರುವುದು ಉತ್ತಮ ಬೆಳೆಯ ಭರವಸೆ ಮೂಡಿಸಿದೆ.

ಗದ್ದೆಯಲ್ಲಿ ಬಿತ್ತನೆ (ಸಾಂದರ್ಭಿಕ ಚಿತ್ರ)
ಗದ್ದೆಯಲ್ಲಿ ಬಿತ್ತನೆ (ಸಾಂದರ್ಭಿಕ ಚಿತ್ರ) (IANS)

By ETV Bharat Karnataka Team

Published : Jul 8, 2024, 12:00 PM IST

ನವದೆಹಲಿ: ಜುಲೈ 6ರ ವೇಳೆಗೆ ದೇಶದಲ್ಲಿ ಬಿದ್ದ ಸಂಚಿತ ಮಳೆಯು ದೀರ್ಘಾವಧಿಯ ಸರಾಸರಿಗಿಂತ (ಜುಲೈ 6 ರಂತೆ) ಶೇ 1ರಷ್ಟು ಹೆಚ್ಚಾಗಿದ್ದರೆ, ಜುಲೈ 3ರಂತೆ ಸಾಪ್ತಾಹಿಕ ಮಳೆಯು ದೇಶದಲ್ಲಿ ದೀರ್ಘಕಾಲೀನ ಸರಾಸರಿಗಿಂತ ಶೇ 32ರಷ್ಟು ಹೆಚ್ಚಾಗಿದೆ ಎಂದು ವರದಿಯೊಂದು ಸೋಮವಾರ ತಿಳಿಸಿದೆ. ಹೀಗಾಗಿ ಈ ಬಾರಿ ಮುಂಗಾರು ಬಹುತೇಕ ಸಾಮಾನ್ಯವಾಗಿರಲಿದೆ ಎಂದು ಅಂದಾಜಿಸಲಾಗಿದೆ.

ಕಳೆದ ವಾರ ದೇಶದ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯಾಗುವುದರೊಂದಿಗೆ ಪ್ರಾದೇಶಿಕ ಮಳೆ ಪ್ರಮಾಣ ವ್ಯತ್ಯಾಸವು ಕಡಿಮೆಯಾಗಿದೆ. ಉತ್ತರ ಮತ್ತು ಪಶ್ಚಿಮ ಭಾರತ (ಶೇ 3), ಮಧ್ಯ ಭಾರತ (ಶೇ ಮೈನಸ್ 6), ಪೂರ್ವ ಮತ್ತು ಈಶಾನ್ಯ ಭಾರತ (ಶೇ 0) ಮತ್ತು ದಕ್ಷಿಣ ಪರ್ಯಾಯ ದ್ವೀಪ (ಶೇ 13) ಗಳಲ್ಲಿ ಈವರೆಗೆ ಸಾಮಾನ್ಯ ಮಳೆಯಾಗಿದೆ ಎಂದು ಎಂಕೆ ಗ್ಲೋಬಲ್ ಫೈನಾನ್ಷಿಯಲ್ ಸರ್ವೀಸಸ್ ವರದಿ ತಿಳಿಸಿದೆ.

"ಮಳೆಯ ಕೊರತೆಯೊಂದಿಗೆ ಜೂನ್ ತಿಂಗಳು ಕೊನೆಗೊಂಡಿತ್ತು. ಹೀಗಾಗಿ ಜುಲೈನಲ್ಲಿ ಉತ್ತಮ ಮಳೆ ಬೇಕಿದೆ. ಅದಕ್ಕೆ ತಕ್ಕಂತೆ ಭರವಸೆಯೊಂದಿಗೆ ಜುಲೈ ತಿಂಗಳು ಆರಂಭವಾಗಿದೆ" ಎಂದು ಎಂಕೆ ಗ್ಲೋಬಲ್ ಫೈನಾನ್ಷಿಯಲ್ ಸರ್ವೀಸಸ್​ನ ಪ್ರಮುಖ ಅರ್ಥಶಾಸ್ತ್ರಜ್ಞ ಮಾಧವಿ ಅರೋರಾ ಹೇಳಿದರು.

ಈ ವರ್ಷ ಬಿತ್ತನೆ ವಿಳಂಬವಾಗಿದ್ದರೂ, ಈಗ ಅದು ವೇಗ ಪಡೆದುಕೊಂಡಿದೆ. ಅಲ್ಲದೆ ಕಳೆದ ವರ್ಷಕ್ಕಿಂತ ಹೆಚ್ಚಿನ ಬಿತ್ತನೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

"ಜೂನ್ 28ರ ಹೊತ್ತಿಗೆ ಬಿತ್ತನೆಗೆ ಒಳಗಾದ ಒಟ್ಟು ಪ್ರದೇಶ (24.1 ಮಿಲಿಯನ್ ಹೆಕ್ಟೇರ್)ವು ಕಳೆದ ವರ್ಷಕ್ಕಿಂತ ತೀವ್ರವಾಗಿ ಹೆಚ್ಚಾಗಿದೆ (ಶೇಕಡಾ 33). ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ತ್ವರಿತ ಬಿತ್ತನೆಯೇ ಇದಕ್ಕೆ ಮುಖ್ಯ ಕಾರಣ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭತ್ತದ ಬಿತ್ತನೆ ಪ್ರದೇಶವು ಕಳೆದ ವರ್ಷದಷ್ಟೇ ಇದೆ. ಕಬ್ಬು ಬಿತ್ತನೆಯೂ ಉತ್ತಮವಾಗಿದೆ. ಆಹಾರೇತರ ಬೆಳೆಗಳಲ್ಲಿ ಹತ್ತಿಯ ಬಿತ್ತನೆ ಹೆಚ್ಚಾಗಿದೆ. ಒಟ್ಟಾರೆ ಬಿತ್ತನೆ ಪ್ರದೇಶವು ಸಾಮಾನ್ಯ ಬಿತ್ತನೆ ಪ್ರದೇಶದ ಶೇಕಡಾ 22ರಷ್ಟಿದೆ. 2023 ರಲ್ಲಿ ಇದೇ ಸಮಯದಲ್ಲಿ ಒಟ್ಟಾರೆ ಬಿತ್ತನೆ ಪ್ರದೇಶವು ಶೇಕಡಾ 18.6 ರಷ್ಟಿತ್ತು. "ಈ ತಿಂಗಳಾಂತ್ಯದ ಹೊತ್ತಿಗೆ ದೇಶದಲ್ಲಿ ಶೇ 80ರಷ್ಟು ಬಿತ್ತನೆ ನಡೆಯುವುದರಿಂದ, ಈ ತಿಂಗಳು ಪೂರ್ತಿ ಉತ್ತಮ ಮಳೆಯಾಗುವುದು ಅಗತ್ಯವಾಗಿದೆ" ಎಂದು ಮಾಧವಿ ಅರೋರಾ ಹೇಳಿದರು.

ಇದನ್ನೂ ಓದಿ: ಭಾರತದ ವಾಯು ಗುಣಮಟ್ಟ ಮಾನದಂಡಗಳ ಪರಿಷ್ಕರಣೆ ಅಗತ್ಯ: ವಿಜ್ಞಾನಿ ಭಾರ್ಗವ್ ಕೃಷ್ಣ - Air Pollution In India

ABOUT THE AUTHOR

...view details