ನವದೆಹಲಿ:ಏಳು ಬಾರಿ ಸಂಸದರಾಗಿ ಆಯ್ಕೆಯಾದ ಭರ್ತೃಹರಿ ಮಹತಾಬ್ ಅವರು 18ನೇ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭವು 18ನೇ ಲೋಕಸಭೆಯ ಮೊದಲ ಅಧಿವೇಶನದ ಆರಂಭಕ್ಕೆ ಮುನ್ಸೂಚನೆ ನೀಡಿತು. ಇಂದಿನ ಅಧಿವೇಶನವು ಹೊಸ ಸಂಸದರ ಪ್ರಮಾಣ ವಚನ ಸ್ವೀಕಾರದೊಂದಿಗೆ ಪ್ರಾರಂಭವಾಗಿದೆ.
ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಹಲವು ಸಂಸದರಿಂದ ಪ್ರಮಾಣ ವಚನ:ಈ ನಡುವೆ ಅಧಿವೇಶನದಲ್ಲಿ ಹೊಸದಾಗಿ ಆಯ್ಕೆ ಆದ ಸಂಸದರು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್, ನಿತ್ಯಾನಂದ ರೈ, ಸಿ.ಆರ್. ಪಾಟೀಲ್, ಡಾ. ಜಿತೇಂದ್ರ ಸಿಂಗ್, ಜಿ. ಕಿಶನ್ ರೆಡ್ಡಿ ಮತ್ತು ಚಿರಾಗ್ ಪಾಸ್ವಾನ್, ಕಿರಣ್ ರಿಜಿಜು, ಮನ್ಸುಖ್ ಮಾಂಡವಿಯಾ ಅವರು 18 ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಜೊತೆಗೆ ಕೇಂದ್ರ ಸಚಿವರಾದ ಹೆಚ್. ಕುಮಾರಸ್ವಾಮಿ, ಜಿತನ್ ರಾಮ್ ಮಾಂಝಿ, ಧರ್ಮೇಂದ್ರ ಪ್ರಧಾನ್, ಭೂಪೇಂದರ್ ಯಾದವ್, ಗಜೇಂದ್ರ ಸಿಂಗ್ ಶೇಖಾವತ್, ಜ್ಯೋತಿರಾದಿತ್ಯ ಸಿಂಧಿಯಾ, ಗಿರಿರಾಜ್ ಸಿಂಗ್, ಪ್ರಲ್ಹಾದ್ ಜೋಶಿ, ಸರ್ಬಾನಂದ ಸೋನೋವಾಲ್, ರಾಮ್ ಮೋಹನ್ ನಾಯ್ಡು ಕಿಂಜರಾಪು, ರಾಜೀವ್ ರಂಜನ್ ಅವರು ಸೇರಿದಂತೆ ಹಲವು ಸಂಸದರು 18ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಹೊಸ ಸಂಸತ್ತಿನ ಕಟ್ಟಡದಲ್ಲಿ ಪ್ರಮಾಣ ವಚನ- ಪ್ರಧಾನಿ ಮೋದಿ: 18ನೇ ಲೋಕಸಭೆಯ ಮೊದಲ ಅಧಿವೇಶನಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, "ಸಂಸದೀಯ ಪ್ರಜಾಪ್ರಭುತ್ವದಲ್ಲಿ, ಇಂದು ಅದ್ಭುತವಾದ ದಿನವಾಗಿದೆ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ನಮ್ಮ ಸ್ವಂತ ಹೊಸ ಸಂಸತ್ತಿನ ಕಟ್ಟಡದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿದೆ. ಈ ಮಹತ್ವದ ದಿನದಂದು ಹೊಸದಾಗಿ ಚುನಾಯಿತರಾದ ಎಲ್ಲ ಸಂಸದರಿಗೆ ನಾನು ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತೇನೆ. ಅವರಿಗೆ ಶುಭಾಶಯಗಳನ್ನು ತಿಳಿಸುತ್ತೇನೆ'' ಎಂದು ಹೇಳಿದರು.
ಪ್ರತಿಪಕ್ಷಗಳು ಪ್ರಜಾಪ್ರಭುತ್ವದ ಘನತೆ ಕಾಪಾಡುತ್ತವೆ- ಮೋದಿ:ಇಂದಿನ 18ನೇ ಲೋಕಸಭೆಯ ಮೊದಲ ಅಧಿವೇಶನ ಪ್ರಾರಂಭವಾಗುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿಗೆ ಆಗಮಿಸಿದರು. ಈ ವೇಳೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ''ದೇಶದ ಜನತೆ ಪ್ರತಿಪಕ್ಷಗಳಿಂದ ಒಳ್ಳೆಯ ಹೆಜ್ಜೆಗಳನ್ನು ನಿರೀಕ್ಷೆ ಮಾಡಿದ್ದಾರೆ. ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಲು ಪ್ರತಿಪಕ್ಷಗಳು ದೇಶದ ಸಾಮಾನ್ಯ ನಾಗರಿಕರ ನಿರೀಕ್ಷೆಗಳನ್ನು ಈಡೇರಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಜನರು ನಾಟಕ ಮತ್ತು ಅವ್ಯವಸ್ಥೆ ಬಯಸುವುದಿಲ್ಲ. ಜನರು ಅಭಿವೃದ್ಧಿ ಕಾರ್ಯಗಳನ್ನು ಬಯಸುತ್ತಾರೆ, ಘೋಷಣೆಗಳಲ್ಲ. ದೇಶಕ್ಕೆ ಉತ್ತಮ ಪ್ರತಿಪಕ್ಷ, ಜವಾಬ್ದಾರಿಯುತ ಪ್ರತಿಪಕ್ಷಗಳ ಅಗತ್ಯವಿದ್ದು, ಈ 18ನೇ ಲೋಕಸಭೆಯಲ್ಲಿ ಗೆದ್ದಿರುವ ಸಂಸದರು ಸಾಮಾನ್ಯರ ಈ ನಿರೀಕ್ಷೆಗಳನ್ನು ಈಡೇರಿಸಲು ಪ್ರಯತ್ನಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ'' ಎಂದು ಪ್ರಧಾನಿ ಮೋದಿ ಹೇಳಿದರು.