ಗುವಾಹಟಿ:ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯು ಪೊಲೀಸರ ವಶದಿಂದ ತಪ್ಪಿಸಿಕೊಂಡು ಕೆರೆಗೆ ಹಾರಿ ಸಾವನ್ನಪ್ಪಿದ್ದ ಘಟನೆ ಅಸ್ಸೋಂನ ನಾಗಾನ್ ಜಿಲ್ಲೆಯ ಧಿಂಗ್ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಅತ್ಯಾಚಾರ ಪ್ರಕರಣ ಸಂಬಂಧ ಕೃತ್ಯದ ಮರುಸೃಷ್ಟಿಗೆ ಸ್ಥಳಕ್ಕೆ ಪೊಲೀಸರು ಕರೆತಂದಾಗ, ಕೈಗೆ ಬೇಡಿ ಇದ್ದರೂ ಆರೋಪಿಯು ಕೆರೆಗೆ ಹಾರಿದ್ದಾನೆ.
ಗುರುವಾರ ನಾಗಾನ್ ಧಿಂಗ್ನಲ್ಲಿ ಟ್ಯೂಷನ್ನಿಂದ ಮರಳುತ್ತಿದ್ದ 10ನೇ ತರಗತಿ ಬಾಲಕಿ ಮೇಲೆ ಮೂವರು ಕಾಮುಕರು ಲೈಂಗಿಕ ದೌರ್ಜನ್ಯ ನಡೆಸಿದ್ದರು. ಈ ಪ್ರಕರಣ ಸಂಬಂಧ ಇಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಮೂವರಲ್ಲಿ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಅಪರಾಧ ಘಟನೆ ಮರು ಸೃಷ್ಟಿಗೆ ಶನಿವಾರ ಬೆಳ್ಳಗ್ಗೆ 3.30ರ ಸಮಯದಲ್ಲಿ ಕರೆದೊಯ್ಯುವಾಗ, ಪೊಲೀಸರಿಂದ ತಪ್ಪಿಸಿಕೊಂಡು ಕೆರೆಗೆ ಹಾರಿದ ಎಂದು ನಾಗಾನ್ ಎಸ್ಪಿ ಸ್ವಪ್ನೀಲ್ ದೇಕಾ ತಿಳಿಸಿದ್ದಾರೆ.
ತಕ್ಷಣಕ್ಕೆ ಪೊಲೀಸರು ಎಸ್ಡಿಆರ್ಎಫ್ಗೆ ಮಾಹಿತಿ ನೀಡಿ, ಕೆರೆಯಲ್ಲಿ ಆರೋಪಿಯ ಪತ್ತೆಗೆ ಮುಂದಾಗಿದ್ದೇವು. ಎರಡು ಗಂಟೆ ಬಳಿಕ ಆತ ಶವವಾಗಿ ಪತ್ತೆಯಾಗಿದ್ದಾನೆ. ಘಟನೆಯಲ್ಲಿ ಪೊಲೀಸರೊಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಪ್ರಕರಣದ ಮತ್ತಿಬ್ಬರು ಆರೋಪುಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಕೂಡ ನಿರಂತರ ಶೋಧ ನಡೆಸಲಾಗುತ್ತಿದೆ. ಘಟನೆ ಸಂಬಂಧ ಧಿಂಗ್ನಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಅಖಿಲ ಅಸ್ಸಾಂ ವಿದ್ಯಾರ್ಥಿ ಯೂನಿಯನ್ ಪ್ರತಿಭಟನೆ ನಡೆಸಿತ್ತು. ಕೋಲ್ಕತ್ತಾದ ಬಳಿಕ ಅಸ್ಸೋಂನಲ್ಲಿ ನಡೆದಿರುವ ಘಟನೆ ಇದೀಗ ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ ಎಂದು ಸ್ಥಳೀಯ ಸಂಘಟನೆಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಸಿಎಂ ಹಿಮಂತ್ ಬಿಸ್ವಾ ಶರ್ಮಾ, ಹೇಯ ಕೃತ್ಯ ಎಸಗಿದ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಿಳಿಸಿದ್ದರು.
ಆರೋಪಿ ಅಂತ್ಯಕ್ರಿಯೆಗೆ ಗ್ರಾಮಸ್ಥರ ವಿರೋಧ:ಸಾವನ್ನಪ್ಪಿದ ಪ್ರಮುಖ ಆರೋಪಿ ಬೊರ್ಭೆಟಿ ಗ್ರಾಮಕ್ಕೆ ಸೇರಿದ್ದು, ಆತನ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗದಿರಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಅಲ್ಲದೇ, ಆತನ ಅಂತ್ಯಸಂಸ್ಕಾರವನ್ನು ಗ್ರಾಮದ ಸ್ಮಶಾನದಲ್ಲಿ ನಡೆಸಲು ಅನುಮತಿ ನಿರಾಕರಿಸಿದ್ದಾರೆ.
ಯುವಕ ಹೀನ ಕೃತ್ಯ ಎಸಗಿದ ಹಿನ್ನೆಲೆ ಬೊರ್ಭೆಟಿ ಗ್ರಾಮಸ್ಥರು ಈ ನಿರ್ಣಯವನ್ನು ಕೈಗೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಗ್ರಾಮದ ಸ್ಮಶಾನಕ್ಕೆ ಆರೋಪಿಯ ಅಂತ್ಯಕ್ರಿಯೆಗೆ ಅವಕಾಶ ನೀಡಬಾರದು. ಈ ಅಂತ್ಯಕ್ರಿಯೆಯಲ್ಲಿ ಯಾರು ಭಾಗಿಯಾಗಬಾರದು. ಆತನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಬೇಕು. ಗ್ರಾಮದ ಯುವಕನ ಕಾರ್ಯವು ನಾಚಿಕೆಗೇಡಿನದ್ದಾಗಿದ್ದು, ಆತನ ಅಂತ್ಯಸಂಸ್ಕಾರವನ್ನು ಸಮುದಾಯದ ಸ್ಮಶಾನದಲ್ಲಿ ನಡೆಸಲು ಅವಕಾಶ ನೀಡಲಾಗುವುದಿಲ್ಲ ಎಂದು ಗ್ರಾಮದ ಮುಖ್ಯಸ್ಥ ಎಂಡಿ ಶಾಹಜಹನ್ ಆಲಿ ಚೌಧರಿ ತಿಳಿಸಿದ್ದಾರೆ.
ಇದನ್ನೂ ಓದಿ: ಟ್ಯೂಷನ್ನಿಂದ ಮರಳುತ್ತಿದ್ದ 10ನೇ ತರಗತಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ