ಶ್ರೀನಗರ (ಜಮ್ಮು- ಕಾಶ್ಮೀರ) :ಕೇಂದ್ರಾಡಳಿತ ಪ್ರದೇಶ ಜಮ್ಮು- ಕಾಶ್ಮೀರದಲ್ಲಿ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಶೀಲ ಶಂಕಿಸಿ 6 ತಿಂಗಳ ಗರ್ಭಿಣಿಯನ್ನು ಪತಿ ನೇಣು ಬಿಗಿದು ಕೊಲೆ ಮಾಡಿ, ಬಳಿಕ ದೇಹವನ್ನು ಸುಟ್ಟು ಹಾಕಿದ್ದಾನೆ. ಸಾಕ್ಷಿ ಸಿಗದಂತೆ, ಆತನ ತಾಯಿ (ಮೃತ ಮಹಿಳೆಯ ಅತ್ತೆ) ಮೂಳೆಗಳನ್ನು ಕಲ್ಲಿನಿಂದ ಜಜ್ಜಿ ಪುಡಿ ಮಾಡಿ ಮನೆಯ ಹಿತ್ತಲಿನಲ್ಲಿ ಚೆಲ್ಲಾಡಿದ್ದಾರೆ.
ಈ ಆಘಾತಕಾರಿ ಮತ್ತು ಕ್ರೂರ ಘಟನೆ ನಡೆದಿದ್ದು, ದಕ್ಷಿಣ ಕಾಶ್ಮೀರದ ಹಪತ್ನಾರ್ ಗ್ರಾಮದಲ್ಲಿ. 2025 ರ ಹೊಸ ವರ್ಷಕ್ಕೆ ಆ ಕುಟುಂಬದಲ್ಲಿ ಹೊಸ ಸದಸ್ಯ ಬರಲಿದ್ದ. ಆದರೆ, ಶೀಲ ಶಂಕೆಯಿಂದ ಮಗು ಮತ್ತು ತಾಯಿ ಬೆಂಕಿಯಲ್ಲಿ ಸುಟ್ಟು ಮಣ್ಣಾಗಿದ್ದಾರೆ. 2024 ರ ಅಕ್ಟೋಬರ್ ತಿಂಗಳಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಭೀಕರ ಪ್ರಕರಣದ ವಿವರ :ಆರೋಪಿ ಇಮ್ರಾನ್ ಖಾನ್ ದಿನಗೂಲಿ ಕಾರ್ಮಿಕ. ಎರಡನೇ ಪತ್ನಿಯಾದ ಶಬ್ನಮ್ ಅಖ್ತರ್ ಮೃತ ನತದೃಷ್ಟೆ. ಶಬ್ನಮ್ ಗ್ರಾಮದ ಬೇರೊಬ್ಬ ವ್ಯಕ್ತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಇಮ್ರಾನ್ ಅನುಮಾನಿಸುತ್ತಿದ್ದ. ಇದಕ್ಕಾಗಿ ಹಲವು ಬಾರಿ ಕಿತ್ತಾಟವೂ ನಡೆದಿತ್ತು. ಇದಕ್ಕಾಗಿ ಹಲವು ಬಾರಿ ರಾಜೀ ಪಂಚಾಯಿತಿ ನಡೆಸಲಾಗಿತ್ತು. ಆದರೂ, ಸಂಬಂಧ ಹಳಿಗೆ ಬಂದಿರಲಿಲ್ಲ ಎಂದು ವರದಿಯಾಗಿದೆ.
ತಾನೇ ಕೊಂದು ನಾಪತ್ತೆ ದೂರು ನೀಡಿದ :ಎರಡನೇ ಪತ್ನಿಯ ಮೇಲೆ ಅನುಮಾನ ಹೊಂದಿದ್ದ ಇಮ್ರಾನ್ ಅಕ್ಟೋಬರ್ 4 ರಂದು ರಾತ್ರಿ ತೀವ್ರ ಜಗಳವಾಡಿ ಆಕೆಯನ್ನು ನೇಣು ಬಿಗಿದು ಕೊಲೆ ಮಾಡಿದ್ದಾನೆ. ಆಗ ಆಕೆ 6 ತಿಂಗಳ ತುಂಬು ಗರ್ಭಿಣಿ. ಕೊಲೆಯ ಬಳಿಕ ಮನೆಯ ಹಿಂಭಾಗದಲ್ಲಿ ಹೂತು ಹಾಕಿದ್ದಾನೆ. ಕೆಲ ದಿನಗಳ ನಂತರ ದುರ್ವಾಸನೆ ಬರುತ್ತಿದ್ದರಿಂದ ಗುಂಡಿಯಿಂದ ಶವವನ್ನು ತೆಗೆದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.