ವಾರಾಣಸಿ (ಉತ್ತರಪ್ರದೇಶ):ಕಾಶಿ ವಿಶ್ವನಾಥನ ದೇಗುಲ ಎಂದು ಹೇಳಲಾಗುವ ವಿವಾದಿತ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ನಡೆಯುತ್ತಿರುವ ಪೂಜೆ ನಿಲ್ಲಿಸಬೇಕೇ ಅಥವಾ ಮುಂದುವರಿಸಬೇಕೆ ಎಂಬ ಬಗ್ಗೆ ಸೋಮವಾರ ಅಲಹಾಬಾದ್ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಏಕಸದಸ್ಯ ಪೀಠವು ಅರ್ಜಿಯನ್ನು ಹೊಸದಾಗಿ ವಿಚಾರಣೆ ನಡೆಸಲಿದೆ.
ಜನವರಿ 31 ರಂದು ವಾರಾಣಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ನೀಡಿತು. ವ್ಯಾಸ್ ಜಿ ಅವರ ಪೂರ್ವಜರು ಇಲ್ಲಿ ಪೂಜೆ ನಡೆಸುತ್ತಾ ಬಂದಿದ್ದರು ಎಂಬ ವಾದಕ್ಕೆ ಕೋರ್ಟ್ ಮನ್ನಣೆ ನೀಡಿತ್ತು. ಇದರ ವಿರುದ್ಧ ಮುಸ್ಲಿಂ ಪಕ್ಷಗಾರರು ಸುಪ್ರೀಂಕೋರ್ಟ್ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು. ಜ್ಞಾನವಾಪಿಯ ನೆಲಮಾಳಿಗೆಯಲ್ಲಿ ಮಾಡಲಾಗುತ್ತಿರುವ ಪೂಜೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕೋರಲಾಗಿತ್ತು. ಆದರೆ, ಇದನ್ನು ವಿಚಾರಣೆ ನಡೆಸಲು ಕೋರ್ಟ್ ನಿರಾಕರಿಸಿ, ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಸೂಚಿಸಿತ್ತು.
ಫೆಬ್ರವರಿ 6 ರಂದು ಅಲಹಾಬಾದ್ ಹೈಕೋರ್ಟ್ ಮುಸ್ಲಿಂ ಮತ್ತು ಹಿಂದೂ ಪರರ ಅರ್ಜಿಯ ವಿಚಾರಣೆಯ ವೇಳೆ ವಾಗ್ವಾದ ನಡೆದಿತ್ತು. ಇದರ ವಿರುದ್ಧ ಕೋರ್ಟ್, ಕೇಸ್ ದಾಖಲಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ನೆಲಮಾಳಿಗೆಯಲ್ಲಿ ವ್ಯಾಸ್ ಜಿ ಅವರ ಕುಟುಂಬ ಹಿಂದಿನಿಂದಲೂ ಪೂಜೆ ಸಲ್ಲಿಸುತ್ತಾ ಬಂದಿದೆ ಎಂದು ಹಿಂದೂ ಪಕ್ಷಗಾರರು ವಾದಿಸಿದ್ದರು. ಇದರ ವಿರುದ್ಧ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಕೋರ್ಟ್ ವಿಚಾರಣೆಯನ್ನ ಫೆಬ್ರವರಿ 12 ರಂದು ಮುಂದೂಡಿತ್ತು.